ಉಡುಪಿ: ಮತ್ತೆ ಐವರಲ್ಲಿ ಶಂಕಿತ ಕೊರೋನ ಸೋಂಕಿನ ಲಕ್ಷಣ
ಉಡುಪಿ, ಮಾ.18: ಜಿಲ್ಲೆಯಲ್ಲಿ ಮತ್ತೆ ಐವರು ಶಂಕಿತ ಕೊರೋನ ವೈರಸ್ ಸೋಂಕಿನ ಲಕ್ಷಣದೊಂದಿಗೆ ಬುಧವಾರ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಐದು ಮಂದಿಯಲ್ಲಿ ಮೂವರು ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರೆ, ಒಬ್ಬರು ಮಣಿಪಾಲದ ಕೆಎಂಸಿ ಹಾಗೂ ಇನ್ನೊಬ್ಬರು ಕುಂದಾಪುರದ ತಾಲೂಕು ಆಸ್ಪತ್ರೆಗಳಲ್ಲಿರುವ ಪ್ರತ್ಯೇಕಿತ ವಾರ್ಡುಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಅವರು ಹೇಳಿದ್ದಾರೆ.
ಇಂದು ದಾಖಲಾದವರಲ್ಲಿ ಇಬ್ಬರು ದುಬಾಯಿ, ತಲಾ ಒಬ್ಬರು ಕತಾರ್, ಅಬುಧಾಬಿ ಹಾಗೂ ಬಹರೇನ್‌ಗಳಿಂದ ಆಗಮಿಸಿದವರಾಗಿದ್ದಾರೆ. ಇವರೆಲ್ಲರ ಗಂಟಲಿನ ದ್ರವದ ಮಾದರಿಗಳನ್ನು ತೆಗೆದು ಪರೀಕ್ಷೆಗಾಗಿ ಶಿವಮೊಗ್ಗದ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ ಎಂದು ಡಾ.ಸೂಡ ತಿಳಿಸಿದ್ದಾರೆ. ಇಂದು ದಾಖಲಾದವರಲ್ಲಿ ಇಬ್ಬರು 60 ವರ್ಷ ಪ್ರಾಯದವರಾದರೆ, ಉಳಿದವರು 47,31 ಹಾಗೂ 19 ವರ್ಷ ಪ್ರಾಯದವರೆಂದು ಅವರು ವಿವರಿಸಿದರು.
ವರದಿ ನೆಗೆಟಿವ್: ಈ ನಡುವೆ ಸೋಮವಾರ ಮಣಿಪಾಲ ಕೆಎಂಸಿಗೆ ದಾಖಲಾಗಿದ್ದ ಗರ್ಭಿಣಿ ಮಹಿಳೆಯ ಮಾದರಿ ಪರೀಕ್ಷಾ ವರದಿ ನೆಗೆಟಿವ್ ಆಗಿ ಬಂದಿದೆ. ಮಂಗಳವಾರ ಜಿಲ್ಲಾಸ್ಪತ್ರೆಗೆ ದಾಖಲಾದ ಐವರ ಅಧಿಕೃತ ವರದಿ ನಾಳೆ ತಮ್ಮ ಕೈಸೇರುವ ನಿರೀಕ್ಷೆ ಇದೆ ಎಂದು ಡಿಎಚ್‌ಓ ತಿಳಿಸಿದ್ದಾರೆ. ಆದರೆ ಐವರ ವರದಿ ನೆಗೆಟಿವ್ ಆಗಿ ಬಂದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.