ವುಹಾನ್ ವೈದ್ಯರು ಮಾಡಿದ ತಪ್ಪುಗಳನ್ನೇ ಯುರೋಪ್ ವೈದ್ಯರು ಮಾಡುತ್ತಿದ್ದಾರೆ: ಚೀನಾ ವೈದ್ಯರ ಅಭಿಮತ
ಬೀಜಿಂಗ್, ಮಾ. 18: ಯುರೋಪ್‌ನಿಂದ ವರದಿಯಾಗುತ್ತಿರುವ ದೈನಂದಿನ ಹೊಸ ಕೊರೋನವೈರಸ್ ಸೋಂಕು ಪ್ರಕರಣಗಳು, ಚೀನಾದಲ್ಲಿ ಸಾಂಕ್ರಾಮಿಕವು ಉತ್ತುಂಗದಲ್ಲಿರುವಾಗ ವರದಿಯಾಗಿದ್ದ ದೈನಂದಿನ ಪ್ರಕರಣಗಳನ್ನು ಮೀರಿಸುತ್ತಿವೆ. ಅದೇ ವೇಳೆ, ಸೋಂಕಿನ ಆರಂಭದ ದಿನಗಳಲ್ಲಿ ಚೀನಾದ ಕೊರೋನವೈರಸ್ ಕೇಂದ್ರಬಿಂದು ವುಹಾನ್‌ನ ವೈದ್ಯರು ಮಾಡಿರುವ ತಪ್ಪುಗಳನ್ನೇ ಯುರೋಪ್‌ನ ವೈದ್ಯರೂ ಮಾಡುತ್ತಿದ್ದಾರೆ ಎಂದು ಚೀನಾದ ಪರಿಣತರು ಬೆಟ್ಟು ಮಾಡಿದ್ದಾರೆ.
ಅವುಗಳಲ್ಲಿ ಮುಖ್ಯವಾದವುಗಳೆಂದರೆ, ವೈದ್ಯಕೀಯ ಕೆಲಸಗಾರರಿಗೆ ಸರಿಯಾದ ರಕ್ಷಣೆಯಿಲ್ಲದಿರುವುದು. ಇದೇ ಕಾರಣಕ್ಕಾಗಿಯೇ ಚೀನಾದಲ್ಲಿ ವೈದ್ಯರು ಮತ್ತು ನರ್ಸ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿತು.
ವುಹಾನ್‌ನಲ್ಲಿ, ಸೋಂಕಿನ ಆರಂಭಿಕ ವಾರಗಳಲ್ಲಿ, ಅಂದರೆ ಜನವರಿಯಲ್ಲಿ ರೋಗದ ಕುರಿತ ಸರಿಯಾದ ತಿಳುವಳಿಕೆಯ ಕೊರತೆ ಮತ್ತು ರಕ್ಷಣಾ ದಿರಿಸುಗಳ ಕೊರತೆಯ ಹಿನ್ನೆಲೆಯಲ್ಲಿ, ರೋಗಿಗಳಿಗೆ ಚಿಕಿತ್ಸೆ ನೀಡಿದ ಸಾವಿರಾರು ಆರೋಗ್ಯ ಕೆಲಸಗಾರರಿಗೆ ಸೋಂಕು ಹರಡಿತು. ಈ ಪೈಕಿ ಕನಿಷ್ಠ 46 ಮಂದಿ ಸಾವನ್ನಪ್ಪಿದ್ದಾರೆ.
‘‘ನಮ್ಮ ಐರೋಪ್ಯ ಸಹೋದ್ಯೋಗಿಗಳೂ ತಮ್ಮ ದೈನಂದಿನ ಚಟುವಟಿಕೆಗಳ ವೇಳೆ ರೋಗದ ಸೋಂಕಿಗೆ ಗುರಿಯಾಗುತ್ತಿದ್ದಾರೆ. ಇದರ ಪ್ರಮಾಣವು ವುಹಾನ್‌ನಲ್ಲಿನ ಆರಂಭಿಕ ಪರಿಸ್ಥಿತಿಗೆ ಸಮಾನವಾಗಿದೆ’’ ಎಂದು ಪೀಕಿಂಗ್ ಯೂನಿಯನ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಗ್ಯಾಸ್ಟ್ರೊ-ಎಂಟರಾಲಜಿ ಪ್ರೊಫೆಸರ್ ವು ಡೊಂಗ್ ಹೇಳಿದ್ದಾರೆ.
ಡೊಂಗ್ ಸೋಮವಾರ ಬೀಜಂಗ್‌ನಲ್ಲಿರುವ ಪತ್ರಕರ್ತರೊಂದಿಗೆ ವಹಾನ್‌ನಿಂದಲೇ ಮಾತನಾಡಿದರು.