ವಿದೇಶದಲ್ಲಿರುವ ಭಾರತೀಯರ ಜತೆ ಸಂಪರ್ಕ : ಯು.ಟಿ.ಖಾದರ್
ಮಂಗಳೂರು, ಮಾ.18: ಕೊರೋನಾ ವೈರಸ್ ಭೀತಿಯಿಂದಾಗಿ ವಿದ್ಯಾರ್ಥಿಗಳು ಸೇರಿದಂತೆ ವಿದೇಶದಲ್ಲಿರುವ ಭಾರತೀಯರು ಅದರಲ್ಲೂ ಕರ್ನಾಟಕದವರ ಜತೆ ಸಂಪರ್ಕ ಇರಿಸಿಕೊಳ್ಳಲು ದಿಲ್ಲಿಯಲ್ಲಿ ಕರ್ನಾಟಕದ ನೋಡಲ್ ಅಧಿಕಾರಿಯನ್ನು ನೇಮಕಗೊಳಿಸಲು ಕ್ರಮ ವಹಿಸುವುದಾಗಿ ಸರಕಾರ ತಿಳಿಸಿದೆ ಎಂದು ಶಾಸಕ ಯು.ಟಿ.ಖಾದರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ವಿದೇಶದಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಮಂಗಳೂರಿನ ವಿದ್ಯಾರ್ಥಿಯೊಬ್ಬರ ಕುರಿತಂತೆ ಸರಕಾರದ ಗಮನವನ್ನು ಸೆಳೆಯಲಾಗಿದೆ. ಇಂತಹ ಅನೇಕರು ತೊಂದರೆಯಲ್ಲಿರುವ ಸಾಧ್ಯತೆ ಇದ್ದು, ಈ ಬಗ್ಗೆ ವಿದೇಶಿ ರಾಯಭಾರ ಕಚೇರಿಯೊಂದಿಗೆ ಸಂಪರ್ಕ ಹೊಂದಿ ಅಲ್ಲಿನ ಭಾರತೀಯರಿಗೆ ನೆರವು ನೀಡುವ ನಿಟ್ಟಿನಲ್ಲಿ ನೋಡಲ್ ಅಧಿಕಾರಿ ನೇಮಕಕ್ಕೆ ಸರಕಾರವನ್ನು ಕೋರಿರುವುದಾಗಿ ಅವರು ಹೇಳಿದರು.
ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ಸರಕಾರ ಹಾಗೂ ಜಿಲ್ಲಾಡಳಿತ ಕೊರೋನಾ ವೈರಸ್ ವಿರುದ್ಧ ಕೈಗೊಂಡಿರುವ ಕಟ್ಟುನಿಟ್ಟಿನ ಹಾಗೂ ದಿಟ್ಟ ಕ್ರಮಗಳ ಬಗ್ಗೆ ಜನರು ಸಹಕಾರ ನೀಡಬೇಕು ಎಂದು ಹೇಳಿದ ಅವರು, ರೈಲ್ವೇ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣಗಳಲ್ಲಿಯೂ ಥರ್ಮಲ್ ತಪಾಸಣೆಯನ್ನು ನಡೆಸಬೇಕೆಂದು ಒತ್ತಾಯಿಸಿದರು.
ಜನರು ಸ್ವಚ್ಛತೆ ಹಾಗೂ ಸ್ವಯಂ ನಿಯಂತ್ರಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ರೋಗ ನಿರೋಧಕ ಶಕ್ತಿ ಉತ್ತಮವಾಗಿರುವವರಿಗೆ ಈ ಸೋಂಕು ಹೆಚ್ಚಾಗಿ ಬಾಧಿಸುವುದಿಲ್ಲ. ಹಾಗಿದ್ದರೂ ಪ್ರಾಕೃತಿಕವಾಗಿ ಸಿಗುವ ಆಹಾರ ವಸ್ತುಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಈಗಾಗಲೇ ವ್ಯಾಪಾರ, ಉದ್ಯೋಗಕ್ಕೆ ಸಾಕಷ್ಟು ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಬಾಡಿಗೆ ಕಟ್ಟಡಗಳಲ್ಲಿ ವಾಸಿಸುತ್ತಿರುವವರಿಗೆ ರಿಯಾಯಿತಿ ಒದಗಿಸಲು ಕಟ್ಟಡ ಮಾಲಕರು ಮುಂದಾಬೇಕು ಎಂದು ಅವರು ಹೇಳಿದರು.