×
Ad

ಮಂಗಳೂರು ಗೋಲಿಬಾರ್-ಹಿಂಸಾಚಾರ ಪ್ರಕರಣ: ಎ.23ರೊಳಗೆ ಸರಕಾರಕ್ಕೆ ಅಂತಿಮ ವರದಿ ಸಲ್ಲಿಕೆ: ಜಗದೀಶ್

Update: 2020-03-19 12:56 IST

ಮಂಗಳೂರು, ಮಾ.19: ಕಳೆದ ಡಿ.19 ರಂದು ನಡೆದ ಮಂಗಳೂರು ಗೋಲಿಬಾರ್ ಮತ್ತು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ದಂತೆ ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿಯೂ ಆದ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ನಗರದ ಸಾಮರ್ಥ್ಯ ಸೌಧದಲ್ಲಿರುವ ಮಂಗಳೂರು ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಗುರುವಾರ ನಡೆಸಿದ ವಿಚಾರಣೆಯ ವೇಳೆ 29 ಪೊಲೀಸರು ಹಾಗು 6 ಮಂದಿ ಸಾರ್ವಜನಿಕರ ಸಹಿತ ಒಟ್ಟು 35 ಮಂದಿ ಸಾಕ್ಷಾಧಾರಗಳನ್ನು ಒದಗಿಸಿದರು. ಇದರೊಂದಿಗೆ ಈವರೆಗೆ ಪೊಲೀಸರು ಮತ್ತು ಸಾರ್ವಜನಿಕರ ಸಹಿತ 350ಕ್ಕೂ ಅಧಿಕ ಮಂದಿ ಸಾಕ್ಷಗಳನ್ನು ನೀಡಿದಂತಾಗಿದೆ.

ಎ.23ರೊಳಗೆ ಅಂತಿಮ ವರದಿ: ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಡಿಸಿ ಜಿ. ಜಗದೀಶ್ ಮಾ.23ರೊಳಗೆ ವರದಿ ಸಲ್ಲಿಸಲು ಸರಕಾರ ನಿರ್ದೇಶಿಸಿತ್ತು. ಆದರೆ, ಅದರೊಳಗೆ ವರದಿ ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ ಹೆಚ್ಚುವರಿಯಾಗಿ 1 ತಿಂಗಳು ವಿಸ್ತರಿಸುವಂತೆ ಸರಕಾರಕ್ಕೆ ಮನವಿ ಮಾಡಲಾಗಿತ್ತು. ಅದಕ್ಕೆ ಸರಕಾರ ಸ್ಪಂದಿಸಿದೆ. ಹಾಗಾಗಿ ಎ.23ರೊಳಗೆ ವಿಚಾರಣೆಯ ಅಂತಿಮ ವರದಿ ಸಲ್ಲಿಸಲಾಗುವುದು ಎಂದರು.

ಈ ಬಗ್ಗೆ ಎ.21ರಂದು ಹೈಕೋರ್ಟ್‌ಗೆ ವರದಿ ಸಲ್ಲಿಸಲು ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಅದಕ್ಕೂ ಮೊದಲೇ ಸರಕಾರಕ್ಕೆ ಮ್ಯಾಜಿಸ್ಟೀರಿಯಲ್ ತನಿಖೆಯ ವರದಿಯನ್ನು ಸಲ್ಲಿಸಲಾಗುವುದು ಎಂದು ಡಿಸಿ ಜಗದೀಶ್ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾ.23ರಂದು ಹೇಳಿಕೆ ನೀಡಲು ಅವಕಾಶ: ದ.ಕ.ಜಿಲ್ಲಾಧಿಕಾರಿ, ಮಂಗಳೂರು ಸಹಾಯಕ ಆಯುಕ್ತರು ಹಾಗೂ ಗೋಲಿಬಾರ್‌ನಲ್ಲಿ ಮೃತರಾ ದವರ ಮರಣೋತ್ತರ ಪರೀಕ್ಷೆ ನಡೆಸಿದ ವೆನ್ಲಾಕ್‌ನ ವೈದ್ಯಾಧಿಕಾರಿಗೆ ಮಾ.23ರಂದು ಹೇಳಿಕೆ ನೀಡಲು ನೋಟಿಸ್ ಜಾರಿಗೊಳಿಸಲಾಗಿದೆ.

ಪೊಲೀಸ್ ಇಲಾಖೆಯ ಪರವಾಗಿ 176 ಮಂದಿ ಸಾಕ್ಷಾಧಾರ ನೀಡಲು ಮುಂದೆ ಬಂದಿದ್ದರು. ಈವರೆಗೆ ಪೊಲೀಸ್ ಆಯುಕ್ತರು, ಡಿಸಿಪಿ, ಎಸಿಪಿ ಸಹಿತ 146 ಮಂದಿಯ ಹೇಳಿಕೆ ದಾಖಲಿಸಲಾಗಿದೆ. ಇನ್ನು 30 ಮಂದಿ ಹೇಳಿಕೆ ನೀಡಲು ಬಾಕಿ ಇದೆ. ಅವರು ಮಾ.23ರಂದು ಹೇಳಿಕೆ ನೀಡಲಿದ್ದಾರೆ. ಉಳಿದಂತೆ ಸಾರ್ವಜನಿಕರಿಗೆ ಹೇಳಿಕೆ ನೀಡಲು ಇನ್ನೊಂದು ಅವಕಾಶ ಕಲ್ಪಿಸಲಾಗುವುದು ಎಂದು ಜಗದೀಶ್ ತಿಳಿಸಿದರು.

ದಾಖಲೆ ಸಲ್ಲಿಸಲು ಸೂಚನೆ: ಪೊಲೀಸ್ ಇಲಾಖೆಯ ವತಿಯಿಂದ ಇನ್ನೂ ಕೆಲವು ದಾಖಲೆಗಳು ಸಲ್ಲಿಕೆಯಾಗಲು ಬಾಕಿ ಇತ್ತು. ಅದನ್ನು ಶೀಘ್ರ ತಲುಪಿಸಲು ಪೊಲೀಸ್ ಇಲಾಖೆಯ ನೋಡಲ್ ಅಧಿಕಾರಿಯಾಗಿರುವ ಎಸಿಪಿ ಬೆಳ್ಳಿಯಪ್ಪ ಅವರಿಗೆ ಸೂಚನೆ ನೀಡಲಾಗಿದೆ ಎಂದು ತನಿಖಾಧಿಕಾರಿ ಜಗದೀಶ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಪೊಲೀಸರ ವಿರುದ್ಧ ಸಾಕ್ಷ ಹೇಳಿಕೆ: ಪೊಲೀಸ್ ಇಲಾಖೆಯ ಪರವಾಗಿ 29 ಮಂದಿ ಗುರುವಾರ ಪೊಲೀಸರು ಹೇಳಿಕೆ ದಾಖಲಿಸಿದರೆ, 2019ರ ಡಿ.19ರಂದು ಪೊಲೀಸರು ನಡೆಸಿದ ಗೋಲಿಬಾರ್‌ಗೆ ಸಂಬಂಧಿಸಿ ಗೋಲಿಬಾರ್ ವಿಕ್ಟಿಮ್ಸ್ ಫೋರಂನ ಸಂಚಾಲಕ ಜಲೀಲ್ ಕೃಷ್ಣಾಪುರ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಕಾರ್ಪೊರೇಟರ್ ಮುನೀಬ್ ಬೆಂಗರೆ, ಹಸನ್ ಅಡೆಕ್ಕಲ್ ಸಹಿತ 6 ಮಂದಿ ನೂರಾರು ವೀಡಿಯೋಗಳುಲ್ಲ 6 ಸಿಡಿ ಸಹಿತ ಲಿಖಿತ ಸಾಕ್ಷಾಧಾರ ಸಲ್ಲಿಸಿದರು.

ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿದ್ದನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಈ ಹಿಂದೆ ತನಿಖಾಧಿಕಾರಿ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಸಂತ್ರಸ್ತರು ಹೈಕೋರ್ಟ್‌ನ ಮೊರೆ ಹೋಗಿದ್ದರು. ಇದೀಗ ಹೈಕೋರ್ಟ್‌ನ ಆದೇಶದಂತೆ ಸಾರ್ವಜನಿಕರು ಸಲ್ಲಿಸಿದ 6 ಸಿಡಿಗಳನ್ನು ತನಿಖಾಧಿಕಾರಿ ಸ್ವೀಕರಿಸಿದ್ದಾರೆ. ಆ ಪೈಕಿ ಹಸನ್ ಅಡೆಕ್ಕಲ್ ಸಲ್ಲಿಸಿದ ಸಿಡಿಯಲ್ಲಿ 33 ವೀಡಿಯೋ ದೃಶ್ಯಾವಳಿ ಇದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News