ಮಂಗಳೂರು ಮಿನಿ ವಿಧಾನಸೌಧ: ನೋ ಪಾರ್ಕಿಂಗ್ ಜಾಗದಲ್ಲಿಟ್ಟ ದ್ವಿಚಕ್ರ ವಾಹನಗಳ ‘ಹೆಲ್ಮೆಟ್’ ಮಾಯ
ಮಂಗಳೂರು, ಮಾ.19: ನಗರ ಮಿನಿ ವಿಧಾನಸೌಧದ ನೋ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಲಾದ ದ್ವಿಚಕ್ರ ವಾಹನಗಳ ‘ಹೆಲ್ಮೆಟ್’ಗಳನ್ನು ಬಚ್ಚಿಟ್ಟು ಅನಧಿಕೃತ ವ್ಯಕ್ತಿಯಿಂದ ಕಮಾಯಿ ಮಾಡಿಸುವ ದಂಧೆಯೊಂದು ಗುರುವಾರ ಬೆಳಕಿಗೆ ಬಂದಿದೆ. ಅಂದಹಾಗೆ, ಈ ದಂಧೆಯು ಕಳೆದ 2 ತಿಂಗಳಿನಿಂದ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ನಗರದ ಕ್ಲಾಕ್ ಟವರ್ ಪಕ್ಕದಲ್ಲಿರುವ ಮಿನಿ ವಿಧಾನಸೌಧಕ್ಕೆ ನಿತ್ಯ ನೂರಾರು ಮಂದಿ ವಾಹನಗಳಲ್ಲಿ ಆಗಮಿಸುತ್ತಾರೆ. ಪಾರ್ಕಿಂಗ್ ಏರಿಯಾ ಭರ್ತಿಯಾಗಿ ನೋ ಪಾರ್ಕಿಂಗ್ ಜಾಗದಲ್ಲೂ ವಾಹನಗಳನ್ನು ನಿಲ್ಲಿಸುತ್ತಾರೆ. ಇದನ್ನೇ ಬಳಸಿಕೊಂಡು ಕೆಲವರು ನೋ ಪಾರ್ಕಿಂಗ್ ಸ್ಥಳದಲ್ಲಿಟ್ಟ ದ್ವಿಚಕ್ರ ವಾಹನಗಳ ಹೆಲ್ಮೆಟ್ ತೆಗೆದು ಒಳಗಿಡುತ್ತಾರೆ. ಹೆಲ್ಮೆಟ್ ವಾಪಸ್ ಪಡೆಯಬೇಕಾದರೆ 150 ರೂ. ಕೊಡಬೇಕು ಎಂದು ವಾದಿಸುತ್ತಾರೆ.
ಕಳೆದ ಎರಡು ತಿಂಗಳಿನಿಂದ ಈ ದಂಧೆ ಅವ್ಯಾಹತವಾಗಿ ನಡೆದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಗುರುವಾರ ವ್ಯಕ್ತಿಯೊಬ್ಬರು ನೋ ಪಾರ್ಕಿಂಗ್ ಜಾಗದಲ್ಲಿಟ್ಟ ಬೈಕ್ ಮೇಲಿನ ಹೆಲ್ಮೆಟ್ ನಾಪತ್ತೆಯಾಗಿದ್ದನ್ನು ಹುಡುಕಾಡಿದ್ದಾರೆ. ಹಾಗೇ ಮಿನಿ ವಿಧಾನಸೌಧದ ಒಳಗಿನ ಕ್ಯಾಬಿನ್‌ನಲ್ಲಿ ಹೆಲ್ಮೆಟ್ ಇಟ್ಟಿರುವುದು ಆ ವ್ಯಕ್ತಿಯ ಗಮನಕ್ಕೆ ಬಂದಿದೆ. ಅಲ್ಲಿಗೆ ಹೋಗಿ ಹೆಲ್ಮೆಟ್ ಕೇಳಿದಾಗ ವ್ಯಕ್ತಿಯೊಬ್ಬರು 150 ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಆ ವ್ಯಕ್ತಿಯು ಹಣ ನೀಡಿ ಹೊರಬಂದಾಗ ಇನ್ನೊಬ್ಬ ಮಹಿಳೆಯ ಹೆಲ್ಮೆಟ್ ಕೂಡ ನಾಪತ್ತೆಯಾಗಿತ್ತು.
ಹೊರಗಿನ ವ್ಯಕ್ತಿಯಿಂದ ಕೃತ್ಯ: ಅಂದಹಾಗೆ, ಸರಕಾರಿ ಕಚೇರಿಯಲ್ಲಿ ರಾಜಾರೋಷವಾಗಿ ಈ ದಂಧೆ ನಡೆಸುತ್ತಿರುವ ವ್ಯಕ್ತಿ ಸರಕಾರಿ ಸಿಬ್ಬಂದಿಯಲ್ಲ ಎಂದು ಇತರ ಸಿಬ್ಬಂದಿಗಳು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಆದರೆ ಮಿನಿ ವಿಧಾನಸೌಧ ಸಿಬ್ಬಂದಿಗಳ ಕೈವಾಡವಿಲ್ಲದೆ ಸರಕಾರಿ ಕಚೇರಿಯಲ್ಲಿ ಹೊರಗಿನ ವ್ಯಕ್ತಿ ಬಂದು ದಂಧೆ ನಡೆಸಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಸಮರ್ಪಕ ಉತ್ತರವಿಲ್ಲ.
ಗುರುವಾರ ಈ ದಂಧೆಯು ಬೆಳಕಿಗೆ ಬಂದಾಗ ಮಿನಿವಿಧಾನ ಸೌಧದ ಕೌಂಟರ್‌ನಲ್ಲಿ 10ಕ್ಕೂ ಅಧಿಕ ಹೆಲ್ಮೆಟ್‌ಗಳ ರಾಶಿ ಕಂಡು ಬಂದಿದೆ. ಹೆಲ್ಮೆಟ್ ತಂದಿಟ್ಟ ವ್ಯಕ್ತಿ ಅಲ್ಲೇ ಕುಳಿತಿದ್ದು, ಈ ಬಗ್ಗೆ ಕಚೇರಿಯ ಇತರ ಸಿಬ್ಬಂದಿ ಬಳಿ ವಿಚಾರಿಸಿದಾಗ ಏನೂ ಗೊತ್ತಿಲ್ಲ ಎಂಬಂತೆ ಸುಮ್ಮನಿದ್ದುದು ಕಂಡು ಬಂತು. ಕೆಲ ದಿನಗಳ ಹಿಂದೆ ನೋ ಪಾರ್ಕಿಂಗ್ ಸ್ಥಳದಲ್ಲಿದ್ದ ವಾಹನಗಳ ತೆರವಿಗೆ ಪೊಲೀಸರಿಗೆ ತಿಳಿಸಲಾಗಿತ್ತು. ಪೊಲೀಸರು ಬಂದಾಗ ಪಾರ್ಕಿಂಗ್ ಸರಿಯಾದ ಜಾಗದಲ್ಲೇ ಮಾಡುತ್ತಾರೆ. ಪೊಲೀಸರು ಇಲ್ಲದಿದ್ದರೆ ಬೇಕಾಬಿಟ್ಟಿ ಪಾರ್ಕಿಂಗ್ ಮಾಡುತ್ತಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಕಚೇರಿ ಸಿಬ್ಬಂದಿಯೊಬ್ಬರು ಉತ್ತರಿಸುತ್ತಾರೆ.
ಅನಧಿಕೃತವಾಗಿ ಹೆಲ್ಮೆಟ್ ತೆಗೆದಿಟ್ಟು ಹಣ ವಸೂಲಿ ಮಾಡಲು ಇವರಿಗೆ ಅಧಿಕಾರ ಕೊಟ್ಟದ್ದು ಯಾರು? ಪೊಲೀಸ್ ಇಲಾಖೆ ಮಾಡಬೇಕಾದ ಕೆಲಸವನ್ನು ಅನಧಿಕೃತ ವ್ಯಕ್ತಿ ಮಾಡಲು ಬಿಡುವುದು ಸರಿಯಾ ಎಂದು ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಮಿಕ ಘಟಕದ ಮಂಗಳೂರು ನಗರಾಧ್ಯಕ್ಷ ವಹಾಬ್ ಕುದ್ರೋಳಿ ಪ್ರಶ್ನಿಸಿದ್ದಾರೆ.
‘ಇಲ್ಲಿ ಬೈಕ್ ಮೇಲೆ ಹೆಲ್ಮೆಟ್ ಇಟ್ಟು ಹೋಗಿದ್ದೆ. ಬರುವಾಗ ಹೆಲ್ಮೆಟ್ ಇರಲಿಲ್ಲ. ವಿಚಾರಿಸಿದಾಗ ಯಾರೋ ಒಬ್ಬರು ತೆಗೆದು ಇಟ್ಟಿದ್ದಾಗಿ ತಿಳಿಸಿದರು. ಅಲ್ಲದೆ 150 ರೂ ವಸೂಲಿ ಮಾಡಿದ್ದಾರೆ ಎಂದು ಹಮೀದ್ ಎಂಬವರು ಪ್ರತಿಕ್ರಿಯಿಸಿದ್ದಾರೆ.