×
Ad

ಮಂಗಳೂರು ತಹಶೀಲ್ದಾರ್, ಕಂದಾಯ ನಿರೀಕ್ಷಕರ ವಿರುದ್ಧ ಎಸಿಬಿ ಪ್ರಕರಣ ದಾಖಲು

Update: 2020-03-19 20:13 IST

ಮಂಗಳೂರು, ಮಾ.19: ಅಕ್ರಮವಾಗಿ ಸರಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡ ಇಬ್ಬರಿಗೆ ಸಹಕಾರ ನೀಡಿದ ಆರೋಪದ ಮೇರೆಗೆ ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಮತ್ತು ಮಂಗಳೂರು ‘ಬಿ’ ಹೋಬಳಿಯ ಕಂದಾಯ ನಿರೀಕ್ಷಕರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನಗರದ ಮಂಗಳೂರು ‘ಎ’ ಹೋಬಳಿಯ ಕೋಡಿಯಾಲ್‌ಬೈಲ್ ‘ಎ’ ಗ್ರಾಮದ ಸ.ನಂ. 1554/2ಬಿಯಲ್ಲಿ ಸೌಮ್ಯ ಆರ್‌ಎನ್ ಮತ್ತು ಪ್ರೀತಿ ಡಿಕುನ್ಹಾ ಪಿರೇರಾ ಎಂಬವರು ಅಧಿಕೃತವಾಗಿ ಯಾವುದೇ ಮನೆಯನ್ನು ಹೊಂದಿರದಿದ್ದರೂ ಕೂಡ 2012ರ ಜನವರಿ 1ರ ಮೊದಲೇ ಈ ಸ್ಥಳದಲ್ಲಿ ಮನೆ ಕಟ್ಟಿಕೊಂಡು ವಾಸವಿರುವುದಾಗಿ ನಕಲಿ ದಾಖಲೆಪತ್ರಗಳನ್ನು ಸೃಷ್ಟಿಸಿ ಸರಕಾರದ 94ಸಿಸಿ ಯೋಜನೆಯಡಿ ಅಕ್ರಮವಾಗಿ ಹಕ್ಕುಪತ್ರವನ್ನು ಮಂಜೂರು ಮಾಡಿಸಿಕೊಂಡಿದ್ದರು.

ಸೌಮ್ಯ ಆರ್‌ಎನ್ ಎಂಬವರು 2018ರಲ್ಲಿ ಬ್ಯಾಂಕ್‌ನಿಂದ ಸಾಲ ಪಡೆದು ಹೊಸ ಮನೆಯನ್ನು ಕಟ್ಟಿಸಿಕೊಂಡಿದ್ದರು. ಈ ಸರ್ವೆ ನಂಬ್ರದಲ್ಲಿ ಯಾವುದೇ ಮನೆಯನ್ನು ಹೊಂದಿರದಿದ್ದರೂ ಕೂಡ ಪ್ರೀತಿ ಡಿಕುನ್ಹಾ ಎಂಬವರಿಗೆ ಅವರು ಸಲ್ಲಿಸಿದ ನಕಲಿ ದಾಖಲೆಯ ಆಧಾರದ ಮೇಲೆ 94ಸಿಸಿ ಯೋಜನೆಯಡಿ ಹಕ್ಕುಪತ್ರ ಪಡೆದುಕೊಂಡಿದ್ದರು. ಈ ಯೋಜನೆಯ ಅಕ್ರಮ ಲಾಭ ಪಡೆಯಲು ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್, ಕಂದಾಯ ನಿರೀಕ್ಷಕ ಜೋಸೆಫ್ ವಾಲ್ಗಟ್ ಪಿರೇರಾ ಮತ್ತು ಮಂಗಳೂರು ಎ ಹೋಬಳಿಯ ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ಗ್ರಾಮಕರಣಿಕ ರಾಗಿದ್ದ ರಮೇಶ್ ಎಂಬವರ ಪತ್ನಿ ಸೌಮ್ಯ ಆರ್‌ಎನ್ ವಿರುದ್ಧ ಪ್ರಕರಣ ದಾಖಲಾಗಿದೆ.

ರಮೇಶ್ ತನ್ನ ಕುಟುಂಬದ 8 ಸದಸ್ಯರಿಗೆ ಮತ್ತು ತನ್ನ ಕಚೇರಿಯ ಸಿಬ್ಬಂದಿಗಳ ಕುಟುಂಬಸ್ಥರಿಗೂ 94 ಸಿಸಿ ಯೋಜನೆಯ ಹಕ್ಕುಪತ್ರ ಮಂಜೂರು ಮಾಡಿಸುವಲ್ಲಿ ಸಹಕರಿಸಿದ್ದರು ಎಂಬ ಆರೋಪವೂ ಇದೆ. ಆರೋಪಿಗಳ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988ರಡಿ ಪ್ರಕರಣ ದಾಖಲಾಗಿದೆ. ಎಸಿಬಿ ಪೊಲೀಸ್ ಅಧಿಕ್ಷಕ ಮಂಜುನಾಥ ಕವರಿಯ ಮಾರ್ಗದರ್ಶನದಲ್ಲಿ ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರ ಕಚೇರಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಕಡತಗಳನ್ನು ಪರಿಶೀಲನೆ ನಡೆಸುವ ಮೂಲಕ ಇನ್‌ಸ್ಪೆಕ್ಟರ್ ಯೋಗೀಶ್ ಕುಮಾರ್ ಬಿಸಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News