ಈಡೇರದ ಸರಕಾರಿ ಬಸ್ ಬೇಡಿಕೆ: ಪಾಣೇಲ ನಿವಾಸಿಗಳಿಂದ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಕೆ
ಮಂಗಳೂರು, ಮಾ.19: ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪಜೀರು ಗ್ರಾಪಂ ವ್ಯಾಪ್ತಿಯ ಪಾಣೇಲ ನಿವಾಸಿಗಳ ಬೇಡಿಕೆಯಲ್ಲಿ ಒಂದಾದ ಸರಕಾರಿ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸದ ಹಿನ್ನಲೆಯಲ್ಲಿ ಪಾಣೇಲ ಪ್ರದೇಶದ ನಾಗರಿಕರು ಪಕ್ಷ ಭೇದ ಮರೆತು ‘ಪಾಣೇಲ ಹೋರಾಟ ಸಮಿತಿ’ಯ ಮೂಲಕ ಮುಂಬರುವ ಗ್ರಾಪಂ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿ ಗಮನ ಸೆಳೆದಿದ್ದಾರೆ.
ಪಾಣೇಲ ಮಸೀದಿಯ ಆಡಳಿತ ಕಮಿಟಿ, ಗಣೇಶ ಯುವಕ ಮಂಡಲ, ಸಂಗಮ್ ಗೇಮ್ಸ್ ಕ್ಲಬ್, ಶಾಲಾ ಆಡಳಿತ ಕಮಿಟಿ, ಮುಸ್ಲಿಂ ಯೆಂಗ್‌ಮೆನ್ಸ್ ಅಸೋಸಿಯೇಶನ್ ಮತ್ತು ಸ್ಥಳೀಯ ಗ್ರಾಪಂ ಸದಸ್ಯರು ಇದಕ್ಕೆ ಬೆಂಬಲ ಸೂಚಿಸಿದ್ದಾರೆ.
ಬಸ್ ಸೌಕರ್ಯ ಕಲ್ಪಿಸುವಂಯೆ ಗ್ರಾಪಂ ಸದಸ್ಯರ ಸಹಿತ ಎಲ್ಲಾ ಜನಪ್ರತಿನಿಧಿಗಳ ಗಮನ ಸೆಳೆದಿದ್ದರೂ ಕೂಡ ಸೂಕ್ತ ರೀತಿಯಲ್ಲಿ ಸ್ಪಂದಿಸದ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ. ಮುಂದೆಯೂ ಪಾಣೇಲ ವಾರ್ಡ್‌ನ ಜನರು ಜಾತಿ ಭೇದ ಮರೆತು, ಪಕ್ಷಗಳನ್ನು ಬದಿಗಿಟ್ಟು ಹೋರಾಟಕ್ಕೆ ಅಣಿಯಾಗಿದ್ದಾರೆ. ಬಸ್ಸಿನ ಸೌಕರ್ಯ ಕಲ್ಪಿಸದ ಹೊರತು ಯಾವುದೇ ಜನಪ್ರತಿನಿಧಿಗಳು ಹಾಗೂ ರಾಜಕಾರಣಿಗಳು ಪಜೀರು ಗ್ರಾಮದ ಪಾಣೇಲ ವಾರ್ಡಿಗೆ ಕಾಲಿಡಬಾರದು ಬ್ಯಾನರ್ ಮೂಲಕ ಎಚ್ಚರಿಸಲಾಗಿದೆ.
ಗ್ರಾಮಚಾವಡಿಯಿಂದ ಪಾಣೇಲ, ಪಡೀಲ್ ಎಂಬಲ್ಲಿಗೆ ಸುಸಜ್ಜಿತವಾಗ ರಸ್ತೆಯಿದೆ. ಈ ರಸ್ತೆಯ ಮೂಲಕ ಮೆಲ್ಕಾರ್-ಬೋಳಿಯಾರು ಪ್ರದೇಶದಿಂದ ಪಾವೂರು, ಕೊಣಾಜೆ,ಮಲಾರ್,ಇನೋಳಿ ಪ್ರದೇಶಕ್ಕೆ ಸಂಪರ್ಕಿಸಲು ಮತ್ತು ಪಾವೂರು, ಇನೋಳಿ,ಪಜೀರು,ಕೊಣಾಜೆ, ಮಲಾರ್ ಪ್ರದೇಶಗಳಿಂದ ಕುರ್ನಾಡು,ಮುಡಿಪು,ಬೋಳಿಯಾರು,ಸಜಿಪ,ಮೆಲ್ಕಾರ್ ಪ್ರದೇಶವನ್ನು ಸಾಧ್ಯವಿದೆ ಎಂದು ಹೋರಾಟ ಸಮಿತಿಯ ರಫೀಕ್ ಪಾಣೇಲ ತಿಳಿಸಿದ್ದಾರೆ.