×
Ad

ಕೊರೋನ ವೈರಸ್ ಭೀತಿ: ಮಂಗಳೂರು ಏರ್‌ಪೋರ್ಟ್‌ನಲ್ಲಿ ಹೈ ಅಲರ್ಟ್

Update: 2020-03-19 20:52 IST

ಮಂಗಳೂರು, ಮಾ.19: ಕೊಡಗಿನಲ್ಲಿ ಕೊರೋನ ಪಾಸಿಟಿವ್ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ- ಕೊಡಗು ಗಡಿಭಾಗದಲ್ಲಿ ಹೆಚ್ಚಿನ ತಪಾಸಣೆಗೆ ಜಿಲ್ಲಾಡಳಿತ ಮುಂದಾಗಿದೆ. ಸುಳ್ಯ ಗಡಿಭಾಗದಲ್ಲಿ ಹೆಚ್ಚುವರಿ ನಿಗಾ ವಹಿಸಲಾಗಿದೆ. ನೆರೆಯ ಜಿಲ್ಲೆ ಕಾಸರಗೋಡು ಹಾಗೂ ಕೊಡಗು ಜಿಲ್ಲೆಯಲ್ಲಿ ಕೊರೋನ ಸೋಂಕು ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಇನ್ನಷ್ಟು ಕ್ರಮಗಳನ್ನು ಬಿಗಿಗೊಳಿಸಲಾಗಿದೆ ಎಂದರು.

ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಳಸುವ ಕಾಸರಗೋಡು ಪ್ರಯಾಣಿಕರನ್ನು ತಪಾಸಣೆ ನಡೆಸಿ ದ.ಕ. ಜಿಲ್ಲಾಡಳಿತದಿಂದಲೇ ಬೆಂಗಾವಲು ವಾಹನಗಳ ಜತೆಯಲ್ಲಿ ಗಡಿಭಾಗದವರೆಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಜತೆಗೆ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಶೇ.60ರಷ್ಟು ಪ್ರಯಾಣಿಕರು ಕಾಸರಗೋಡಿನವರಾಗಿದ್ದಾರೆ. ವಿಮಾನದ ಮೂಲಕ ಆಗಮಿಸುವ ಕಾಸರಗೋಡು ಪ್ರಯಾಣಿಕರನ್ನು ಕೇರಳ ತಲುಪಿಸಲು ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಈ ಬಸ್ಸು ಕೇರಳ ಪ್ರಯಾಣಿಕರನ್ನು ದ.ಕ. ಗಡಿ ಭಾಗವಾದ ತಲಪಾಡಿವರೆಗೆ ಕೊಂಡೊಯ್ದು ಬಿಡುತ್ತಿದೆ. ಈ ಮೂಲಕ ಸೋಂಕು ಹರಡುವುದನ್ನು ತಡೆಗಟ್ಟಲು ತುರ್ತು ಕ್ರಮಕ್ಕೆ ಜಿಲ್ಲಾಡಳಿತ ಸಜ್ಜಾಗಿದೆ. ಅಲ್ಲಿಂದ ಕಾಸರಗೋಡು ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.

ಅಂತಾರಾಷ್ಟ್ರೀಯ ವಿಮಾನಗಳ ಮೂಲಕ ಆಗಮಿಸುವ ಪ್ರಯಾಣಿಕರನ್ನು ಸರ್ಕಾರದ ಸೂಚನೆ ಮೇರೆಗೆ ಎ, ಬಿ, ಸಿ ವರ್ಗೀಕರಣ ಮಾಡಲಾಗುತ್ತಿದೆ. ಬಂದ ಎಲ್ಲರನ್ನೂ ತಪಾಸಣೆ ನಡೆಸಲಾಗುತ್ತಿದ್ದು, ಅವರಲ್ಲಿ ಸೋಂಕಿನ ಲಕ್ಷಣ ಇದ್ದವರನ್ನು ‘ಎ’ ವಿಭಾಗ ಎಂದು ನಮೂದಿಸಿ ಆಸ್ಪತ್ರೆಗೆ ಕರೆದೊಯ್ಯಲಾಗುವುದು. ಸೋಂಕಿನ ಲಕ್ಷಣ ಇಲ್ಲದಿದ್ದರೂ 60 ವರ್ಷ ವಯಸ್ಸು ಮೇಲ್ಪಟ್ಟ ಹಾಗೂ ಬಿಪಿ, ಡಯಾಬಿಟೀಸ್, ಆಸ್ತಮಾ ತೊಂದರೆ ಇರುವವರು ‘ಬಿ’ ವಿಭಾಗವಾಗಿದ್ದು, ಅವರನ್ನು ಮಂಗಳೂರಿನ ಇಎಸ್‌ಐ ಆಸ್ಪತ್ರೆಗೆ ಕೊಂಡಯ್ದು 14 ದಿನಗಳ ವೈದ್ಯಕೀಯ ನಿಗಾದಲ್ಲಿ ಇರಿಸಲಾಗುವುದು. ಸೋಂಕಿನ ಯಾವುದೇ ಲಕ್ಷಣ ಇಲ್ಲದ 60 ವರ್ಷ ವಯೋಮಾನಕ್ಕಿಂತ ಕೆಳಗಿನವರು ‘ಸಿ’ ವಿಭಾಗಕ್ಕೆ ಸೇರುತ್ತಾರೆ, ಅವರನ್ನು ಕಡ್ಡಾಯವಾಗಿ 14 ದಿನಗಳ ಕಾಲ ಮನೆಯಲ್ಲೇ ಕ್ವಾರಂಟೈನ್‌ಗೆ (ಪ್ರತ್ಯೇಕ) ಒಳಪಡುವಂತೆ ಸೂಚಿಸಲಾಗುವುದು. ಅಲ್ಲದೆ, ಎಲ್ಲ ವಿಮಾನ ಪ್ರಯಾಣಿಕರ ಕೈಗೆ ಅಳಿಸಲಾಗದ ಶಾಯಿಯ ಸೀಲು ಹಾಕುವ ಕಾರ್ಯವೂ ಚಾಲನೆಗೊಂಡಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ನಿಗಾದಲ್ಲಿ 51 ಮಂದಿ: ಮಂಗಳೂರು ವಿಮಾನ ನಿಲ್ದಾಣದ ಮೂಲಕ ಆಗಮಿಸಿದ ಕಾಸರಗೋಡು ಪ್ರಯಾಣಿಕನಲ್ಲಿ ಇತ್ತೀಚೆಗೆ ಕೊರೋನ ‘ಪಾಸಿಟಿವ್’ ವರದಿ ಬಂದಿರುವುದರಿಂದ ಆ ವಿಮಾನದ ಮೂಲಕ ಆಗಮಿಸಿದ ಎಲ್ಲ 51 ಮಂದಿಯ ಮೇಲೆ ನಿಗಾ ವಹಿಸಲಾಗಿದೆ. ಎಲ್ಲರನ್ನು ಕ್ವಾರಂಟೈನ್‌ನಲ್ಲಿರಲು ಸೂಚಸಲಾಗಿದ್ದು, ಆರೋಗ್ಯ ಇಲಾಖೆಯ ಮೂಲಕ ಪ್ರತಿಯೊಬ್ಬರನ್ನೂ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಚೆಕ್‌ಪೋಸ್ಟ್ ನಿಯೋಜನೆ: ಕೊಡಗು ಹಾಗೂ ಪಕ್ಕದ ರಾಜ್ಯ ಕೇರಳದಿಂದ ದ.ಕ. ಜಿಲ್ಲೆಗೆ ಸೋಂಕು ಹರಡುವುದನ್ನು ತಪ್ಪಿಸಲು ಚೆಕ್‌ಪೋಸ್ಟ್‌ಗಳಲ್ಲಿ ತಂಡಗಳನ್ನು ನಿಯೋಜಿಸಿ ಸ್ಕ್ರೀನಿಂಗ್ ನಡೆಸಲಾಗುತ್ತಿದೆ. ಜಿಲ್ಲೆಗೆ ಬರುವ ಪ್ರತಿಯೊಬ್ಬರನ್ನೂ ಸ್ಕ್ರೀನಿಂಗ್‌ಗೆ ಒಳಪಡಿಸಿಯೇ ಬಿಡಲಾಗುತ್ತಿದೆ. ಗುರುವಾರದಿಂದಲೇ ಇದು ಆರಂಭವಾಗಿದೆ. ಬಸ್ ಹಾಗೂ ಖಾಸಗಿ ವಾಹನದಲ್ಲಿ ಬರುವವರನ್ನೂ ತಪಾಸಣೆ ಮಾಡಲಾಗುತ್ತಿದೆ. ತಲಪಾಡಿ ಮಾತ್ರವಲ್ಲದೆ, ಸುಳ್ಯದ ಜಾಲ್ಸೂರು ಮತ್ತು ಕಲ್ಲುಗುಂಡಿಯಲ್ಲೂ ತಪಾಸಣೆ ಕೈಗೊಳ್ಳಲಾಗಿದೆ. ಕೊರೋನಾ ಸೋಂಕಿನ ಲಕ್ಷಣ ಕಂಡುಬಂದರೆ ತಕ್ಷಣ ಮಂಗಳೂರಿನ ಆಸ್ಪತ್ರೆಗೆ ರವಾಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಶಾನಾಡಿ ಅಜಿತ್‌ಕುಮಾರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಕಚೇರಿಯಲ್ಲೂ ಥರ್ಮಲ್ ಚೆಕ್ 

ವಿಮಾನ ನಿಲ್ದಾಣ ಮಾತ್ರವಲ್ಲ, ಈಗ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲೂ ಥರ್ಮಲ್ ಚೆಕ್‌ಗೆ ವ್ಯವಸ್ಥೆ ಮಾಡಲಾಗಿದೆ. ಡಿಸಿ ಕಚೇರಿಗೆ ಬರುವ ಎಲ್ಲ ಸಾರ್ವಜನಿಕರು, ಅಧಿಕಾರಿಗಳು ಕೂಡ ಈ ಟೆಸ್ಟ್‌ಗೆ ಒಳಪಡಬೇಕು. ಡಿಸಿ ಕಚೇರಿ ಪ್ರವೇಶ ದ್ವಾರದಲ್ಲೇ ತಪಾಸಣೆ ಕಾರ್ಯವನ್ನು ಗುರುವಾರ ಬೆಳಗ್ಗಿನಿಂದಲೇ ಆರಂಭಿಸಲಾಗಿದೆ. 96.8 ಡಿಗ್ರಿ ಸೆ.ಗಿಂತ ಹೆಚ್ಚು ಉಷ್ಣಾಂಶ ದಾಖಲಾದರೆ ಜಿಲ್ಲಾಧಿಕಾರಿ ಕಚೇರಿಗೆ ನಾಗರಿಕರಿಗೆ ಪ್ರವೇಶ ನಿರ್ಬಂಧಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News