×
Ad

ಕೊರೋನ ವೈರಸ್ ಭೀತಿ: ಸರಕಾರಿ ಸೇವೆ ಭಾಗಶಃ ಸ್ಥಗಿತ: ಜಿಲ್ಲಾಧಿಕಾರಿ ಸಿಂಧೂ

Update: 2020-03-19 20:59 IST

ಮಂಗಳೂರು, ಮಾ.19: ಸಾರ್ವಜನಿಕರು ವಿವಿಧ ಸೇವೆಗಳಿಗಾಗಿ ಸರಕಾರಿ ಕಚೇರಿಗಳಿಗೆ ತೆರಳುತ್ತಿರುವ ಸಂದರ್ಭ ಹೆಚ್ಚು ಜನಸಂದಣಿ ಕೂಡುತ್ತಿದೆ. ಕೊರೋನ ಭೀತಿಯಿಂದಾಗಿ ಸರಕಾರಿ ಇಲಾಖೆಗಳ ಬಹುತೇಕ ಸೇವೆಗಳನ್ನು ಮಾ.31ರವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆ, ಮೆಡಿಕಲ್, ಬ್ಯಾಂಕ್, ಅಗ್ನಿಶಾಮಕ, ಪೊಲೀಸ್, ಕುಡಿಯುವ ನೀರು ಸರಬರಾಜು, ದೀನಸಿ ಅಂಗಡಿಗಳನ್ನು ಹೊರತುಪಡಿಸಿ ಹೆಚ್ಚು ಜನಸೇರುವ ಎಲ್ಲ ಸರಕಾರಿ ಇಲಾಖೆಗಳ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಜಿಲ್ಲಾಡಳಿತ ತೀರ್ಮಾನ ಕೈಗೊಂಡಿದೆ ಎಂದರು.

ದ.ಕ. ಜಿಲ್ಲಾ ವ್ಯಾಪ್ತಿಯ ಕಂದಾಯ ಇಲಾಖೆಯ ಅಟಲ್ ಜೀ ಜನಸ್ನೇಹಿ ಕೇಂದ್ರ, ಸ್ಪಂದನ ಕೇಂದ್ರ, ಆಧಾರ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಸೇವೆಗಳು, ಪ್ರಾದೇಶಿಕ ಸಾರಿಗೆ ಇಲಾಖೆಗಳಲ್ಲಿ (ಆರ್‌ಟಿಒ) ನೀಡುವ ಹೊಸ ವಾಹನ ಚಾಲನಾ ರಹದಾರಿ, ಕಲಿಯುವವರ ಪರವಾನಿಗೆ ನೋಂದಣಿ (ನವೀಕರಣಕ್ಕೆ ಅನ್ವಯವಿಲ್ಲ) ಸೇವೆಗಳನ್ನು ನಿಲ್ಲಿಸಲಾಗುತ್ತಿದೆ ಎಂದರು.

ಉಪನೋಂದಣಾಧಿಕಾರಿಗಳ ಕಚೇರಿಯ ಸ್ಥಿರಾಸ್ತಿ ನೋಂದಣಿ ಸೇವೆ, ನಗರ ಸ್ಥಳೀಯ ಸಂಸ್ಥೆಗಳ ಮತ್ತು ಗ್ರಾಪಂ ವ್ಯಾಪ್ತಿಯ ಖಾತೆ, ಸಾರ್ವಜನಿಕ ಹರಾಜು, ಗ್ರಾಮಸಭೆ, ಇತರ ಪರವಾನಿಗೆ, ಜನನ-ಮರಣ ಪ್ರಮಾಣಪತ್ರ ವಿತರಿಸುವ ಸೇವೆಗಳು ಕಾರ್ಯನಿರ್ವಹಿಸುವುದಿಲ್ಲ. ಬ್ಯಾಂಕಿಂಗ್ ಹೊತರುಪಡಿಸಿ ಸಹಕಾರಿ ಸಂಘಗಳ ಸೇವೆಗಳು, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಇಲಾಖೆಯ ಲ್ಲಿನ ಸೇವೆಗಳು (ರೈತ ಆತ್ಮಹತ್ಯೆ, ರೈತರ ಆಕಸ್ಮಿಕ ಮರಣ, ಇತರ ತುರ್ತು ವಿಷಯಕ್ಕೆ ಅನ್ವಯವಿಲ್ಲ) ಸ್ಥಗಿತಗೊಳ್ಳಲಿವೆ ಎಂದು ಹೇಳಿದರು.

ಸಮಾಜ ಕಲ್ಯಾಣ, ಅಲ್ಪ ಸಂಖ್ಯಾತರ ಕಲ್ಯಾಣ, ಹಿಂದುಳಿದ ವರ್ಗ ಇಲಾಖೆಗಳ ಅಧೀನದಲ್ಲಿ ಬರುವ ನಿಗಮ ಮಂಡಳಿಗಳು, ಯುವ ಸಬಲೀಕರಣ, ಕ್ರೀಡೆ, ಕನ್ನಡ-ಸಂಸ್ಕೃತಿ ಇಲಾಖೆಯ ಸೇವೆಗಳು ಸ್ಥಗಿತಗೊಳ್ಳಲಿವೆ. ಎಲ್ಲ ನಿರ್ಬಂಧಿತ ಸೇವೆಗಳ ಪಟ್ಟಿಗೆ ಹೊಸ ಸೇವೆಗಳನ್ನು ಸೇರ್ಪಡೆ ಮಾಡಲು ಅಥವಾ ಬದಲಾವಣೆ ಮಾಡಲು ಪರಿಸ್ಥಿತಿ ತೀವ್ರತೆಯ ಅನುಗುಣವಾಗಿ ಕ್ರಮ ವಹಿಸಲಾಗುವುದು ಎಂದು ಡಿಸಿ ಮಾಹಿತಿ ನೀಡಿದ್ದಾರೆ.

ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾದ ಯಾವುದೇ ಇಲಾಖೆಯ ಕಚೇರಿಗಳಿಗೆ ರಜೆ ಘೋಷಣೆಯಾಗಿಲ್ಲ. ಸಂಬಂಧಿಸಿದ ಎಲ್ಲ ಅಧಿಕಾರಿ/ಸಿಬ್ಬಂದಿ ಎಂದಿನಂತೆಯೇ ಕಚೇರಿಯಲ್ಲಿ ಲಭ್ಯವಿದ್ದು, ಕರ್ತವ್ಯ ನಿರ್ವಹಿಸಬೇಕು. ಅನಧಿಕೃತ ಗೈರು ಹಾಜರು ಅಥವಾ ಅನಧಿಕೃತವಾಗಿ ಕಚೇರಿಯನ್ನು ತೆರೆಯದಿದ್ದಲ್ಲಿ ಅಂತಹ ಅಧಿಕಾರಿ/ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾವಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ಯಾವುದಕ್ಕೆ ಅನ್ವಯವಾಗಲ್ಲ ?

ಬ್ಯಾಂಕ್, ಅಂಚೆ ಕಚೇರಿ, ಪೊಲೀಸ್, ಅಗ್ನಿಶಾಮಕ, ದೂರವಾಣಿ, ಇಂಟರ್‌ನೆಟ್, ಕೆಎಸ್ಸಾರ್ಟಿಸಿ, ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು, ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್ ಪೂರೈಕೆ, ಒಳಚರಂಡಿ, ದಿನಸಿ/ಹಣ್ಣು ಮಾರುಕಟ್ಟೆ, ಆಸ್ಪತ್ರೆ, ಪಶು ಆಸ್ಪತ್ರೆ, ಔಷಧಿ ಅಂಗಡಿ, ಶವ ಸಂಸ್ಕಾರ ಸಹಿತ ಇತ್ಯಾದಿ ಸೇವೆಗಳು ಹಾಗೂ ತುರ್ತು ಸೇವೆಗಳಿಗೆ ಸ್ಥಗಿತದ ಆದೇಶವು ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News