ಉಡುಪಿ: ಎಂಡೋಸಲ್ಫಾನ್ ರೋಗಿಗಳ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ
ಉಡುಪಿ, ಮಾ.19: ಉಡುಪಿ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತರಾಗಿ ಹಾಸಿಗೆ ಹಿಡಿದಿರುವ ರೋಗಿಗಳ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ಮತ್ತು ಆರೈಕೆ ಮಾಡಲು,ಎಂಡೋಸಲ್ಫಾನ್ ಪೀಡಿತರ ಆರೋಗ್ಯ ಸುಧಾರಣಾ ಕಾರ್ಯಕ್ರಮ ದಡಿಯಲ್ಲಿ ಸಂಚಾರಿ ವೈದ್ಯಕೀಯ ಮತ್ತು ಫಿಸಿಯೋಥೆರಪಿ ಘಟಕವನ್ನು ಗುರುವಾರದಿಂದ ಆರಂಭಿಸಲಾಗಿದೆ ಎಂದು ಡಿಎಚ್‌ಓ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಗುರುವಾರ ಸಂಚಾರಿ ವೈದ್ಯಕೀಯ ಮತ್ತು ಫಿಸಿಯೋಥೆರಪಿ ಘಟಕ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು. ಸಂಚಾರಿ ವೈದ್ಯಕೀಯ ಹಾಗೂ ಫಿಸಿಯೋಥೆರಪಿ ಘಟಕದಲ್ಲಿ ಒಬ್ಬ ಫಿಸಿಯೋಥೆರಪಿಸ್ಟ್, ಸ್ಟಾಪ್ ನರ್ಸ್ ಹಾಗೂ ಡಿ ಗ್ರೂಪ್ ನೌಕರರಿದ್ದು, ಸಂಚಾರಿ ವಾಹನದಲ್ಲಿ ತೆರಳುವ ಈ ಸಿಬ್ಬಂದಿ, ಎಂಡೋ ಪೀಡಿತವಾಗಿ ಹಾಸಿಗೆ ಹಿಡಿದಿರುವ ರೋಗಿಗಳ ಮನೆಗಳಿಗೆ ನಿಯಮಿತವಾಗಿ ಭೇಟಿ ನೀಡಿ, ಅಗತ್ಯವಿರುವ ಫಿಸಿಯೋಥೆರಪಿ ಚಿಕಿತ್ಸೆ, ಔಷಧಿ, ವೈದ್ಯಕೀಯ ಸಲಹೆ- ಸೂಚನೆಗಳನ್ನು ನೀಡುತ್ತಾರೆ ಎಂದವರು ತಿಳಿಸಿದರು.
ಪ್ರಸ್ತುತ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ 29 ಮಂದಿ, ಉಡುಪಿಯಲ್ಲಿ 8 ಮಂದಿ, ಕಾರ್ಕಳದಲ್ಲಿ 11 ಮಂದಿ ಸೇರಿ ಒಟ್ಟು 48 ಮಂದಿ ಎಂಡೋಸಲ್ಫಾನ್‌ನಿಂದಾಗಿ ಹಾಸಿಗೆ ಹಿಡಿದಿದ್ದು, ಅವರಿಗೆ ಈ ಸೇವೆಯನ್ನು ಒದಗಿಸಲಾಗುವುದು ಎಂದು ಡಿಹೆಚ್‌ಓ ತಿಳಿಸಿದರು.