×
Ad

ಬಿಜೆಪಿ ಶಾಸಕನಿಗೆ ವಿಧಾನಸಭೆ ಪ್ರವೇಶಿಸದಂತೆ ನಿಷೇಧಿಸಿದ ಸುಪ್ರೀಂ ಕೋರ್ಟ್

Update: 2020-03-19 22:17 IST

ಹೊಸದಿಲ್ಲಿ, ಮಾ.19: ಮಣಿಪುರ ಸಚಿವ, ಬಿಜೆಪಿ ಶಾಸಕ ಟಿ ಶ್ಯಾಮಕುಮಾರ್ ಸಿಂಗ್ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಮುಗಿಯುವವರೆಗೆ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ಸೂಚಿಸಿರುವ ಸುಪ್ರೀಂ ಕೋರ್ಟ್, ಅವರು ವಿಧಾನಸಭೆ ಪ್ರವೇಶಿಸದಂತೆ ನಿಷೇಧಿಸಿದೆ.

ಸಿಂಗ್‌ರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಬೇಕೆಂಬ ಅರ್ಜಿಯ ಹಿನ್ನೆಲೆಯಲ್ಲಿ ಸುಪ್ರೀಂ ಈ ತೀರ್ಪು ನೀಡಿದೆ. 2017ರ ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ಶ್ಯಾಮ್‌ಕುಮಾರ್ ಸಿಂಗ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಕಾಂಗ್ರೆಸ್ 28, ಬಿಜೆಪಿ 21 ಸ್ಥಾನ ಗಳಿಸಿತ್ತು. ನ್ಯಾಷನಲ್ ಪೀಪಲ್ಸ್ ಪಕ್ಷದ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಾಗ ಕಾಂಗ್ರೆಸ್ ತೊರೆದಿದ್ದ ಸಿಂಗ್ ಬಿಜೆಪಿ ಮೈತ್ರಿಕೂಟ ಬೆಂಬಲಿಸಿದ್ದರು. ಅವರನ್ನು ಕೈಗಾರಿಕೆ ಮತ್ತು ಪರಿಸರ ಸಚಿವರನ್ನಾಗಿ ನೇಮಿಸಲಾಗಿತ್ತು. ಬಳಿಕ ಸಿಂಗ್‌ರನ್ನು ಕಾಂಗ್ರೆಸ್‌ನಿಂದ ಅಮಾನತುಗೊಳಿಸಲಾಗಿದೆ.

ಸಿಂಗ್‌ರನ್ನು ಪಕ್ಷಾಂತರ ಕಾಯ್ದೆಯಡಿ ಅನರ್ಹಗೊಳಿಸಬೇಕೆಂದು ಕೋರಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ವಿಧಾನಸಭೆ ಸ್ಪೀಕರ್ ಪರಿಗಣಿಸದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು. ಅನರ್ಹತೆ ಕೋರಿದ ಅರ್ಜಿಯ ಬಗ್ಗೆ ನಿಗದಿತ ಅವಧಿಯೊಳಗೆ ನಿರ್ಧಾರ ಕೈಗೊಳ್ಳಬೇಕು ಎಂಬ ಅರ್ಜಿಯನ್ನು ಹೈಕೋರ್ಟ್ ತಳ್ಳಿಹಾಕಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ನ್ಯಾಯಪೀಠ ಸಿಂಗ್ ವಿರುದ್ಧ ತೀರ್ಪು ನೀಡಿ, ಮುಂದಿನ ವಿಚಾರಣೆಯನ್ನು ಮಾರ್ಚ್ 30ಕ್ಕೆ ನಿಗದಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News