ಚಂಡಿಗಢ: ಮೊದಲ ಕೊರೋನ ವೈರಸ್ ಸೋಂಕು ಪ್ರಕರಣ ದೃಢ

Update: 2020-03-19 16:49 GMT

ಚಂಡಿಗಢ, ಮಾ. 18: ಲಂಡನ್‌ನಿಂದ ಹಿಂದಿರುಗಿದ ಚಂಡಿಗಢದ 23 ವರ್ಷದ ಯುವತಿಯೋರ್ವರಿಗೆ ಕೊರೋನ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ.

ಕೇಂದ್ರಾಡಳಿತ ಪ್ರದೇಶದಲ್ಲಿ ಕಂಡು ಬಂದ ಮೊದಲ ಕೊರೋನ ವೈರಸ್ ಸೋಂಕು ಪ್ರಕರಣ ಇದಾಗಿದೆ. ಚಂಡಿಗಢದ ಸೆಕ್ಟರ್ 21ರ ನಿವಾಸಿ ಯುವತಿಯ ರಕ್ತ ಹಾಗೂ ಗಂಟಲು ದ್ರವದ ಮಾದರಿಯನ್ನು ಪೋಸ್ಟ್ ಗ್ರಾಜುವೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಆ್ಯಂಡ್ ರಿಸರ್ಚ್ (ಪಿಜಿಐಎಂಇಆರ್)ನಲ್ಲಿ ಪರೀಕ್ಷೆಗೆ ಒಳಪಡಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಂಡನ್‌ನಿಂದ ಹಿಂದಿರುಗಿದ ಯುವತಿಯ ರಕ್ತ ಹಾಗೂ ಗಂಟಲು ದ್ರವದ ಮಾದರಿ ಪರೀಕ್ಷೆಯಲ್ಲಿ ಅವರಿಗೆ ಕೊರೋನ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ ಎಂದು ಪಿಜಿಐಎಂಇಆರ್‌ನ ನಿರ್ದೇಶಕ ಜಗತ್ ರಾಮ್ ತಿಳಿಸಿದ್ದಾರೆ.

ಅವರನ್ನು ಇಲ್ಲಿನ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಇದು ಚಂಡಿಗಢದಲ್ಲಿ ವರದಿಯಾಗಿರುವ ಮೊದಲ ಕೊರೋನ ವೈರಸ್ ಸೋಂಕು ಪ್ರಕರಣ ಎಂದು ಅವರು ಹೇಳಿದ್ದಾರೆ. ಈ ನಡುವೆ ಕೊರೋನ ವೈರಸ್ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರಾಡಳಿತ ಪ್ರದೇಶವಾದ ಚಂಡಿಗಢದ ಸೆಕ್ರೇಟರಿಯೇಟ್‌ನಲ್ಲಿ ಕಾರ್ಯನಿರ್ವಹಣೆಯನ್ನು ಆಡಳಿತ ರದ್ದುಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News