×
Ad

ಒಣ ಕಸ ನೆಪದಲ್ಲಿ ಹಸಿ ಕಸ ಹಾಕಿದ ಬಂಟ್ವಾಳ ಪುರಸಭೆ !

Update: 2020-03-19 22:24 IST

ಬಂಟ್ವಾಳ, ಮಾ.19: ಕಂಚಿನಡ್ಕ ಪದವು ಡಂಪಿಂಗ್ ಯಾರ್ಡ್ ನಲ್ಲಿ ಪ್ರಸಕ್ತ ಒಣ ಕಸವನ್ನು ಮಾತ್ರ ಡಂಪ್ ಮಾಡುವುದಾಗಿ ಭರವಸೆ ನೀಡಿದ್ದ ಬಂಟ್ವಾಳ ಪುರಸಭೆ ಬುಧವಾರ ಮತ್ತು ಗುರುವಾರ ಹಸಿ ಕಸವನ್ನು ಡಂಪ್ ಮಾಡಿದ್ದು, ಆಕ್ರೋಶಗೊಂಡ ಸ್ಥಳೀಯರು ಸ್ಥಳದಲ್ಲಿದ್ದ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಧಿಕ್ಕಾರದ ಘೋಷಣೆ ಕೂಗಿದರು.

ಬುಧವಾರ ತ್ಯಾಜ್ಯವನ್ನು ತುಂಬಿಕೊಂಡು ಬಂದ ಲಾರಿಯನ್ನು ಗ್ರಾಮಸ್ಥರು ತಡೆದು ನಿಲ್ಲಿಸಿ ಪ್ರತಿಭಟನೆ ನಡೆಸಿದ್ದ ಸಂದರ್ಭದಲ್ಲಿ, ಡಂಪಿಂಗ್ ಯಾರ್ಡ್‌ನಲ್ಲಿ ವೈಜ್ಞಾನಿಕ ಸಿದ್ಧತೆಗಳು ಪೂರ್ಣಗೊಳ್ಳುವವರೆಗೆ ಹಾಗೂ ಸ್ಥಳೀಯರ ಬೇಡಿಕೆಗಳನ್ನು ಈಡೇರಿಸುವವರೆ ಘಟಕದಲ್ಲಿ ಹಸಿ ಕಸವನ್ನು ಡಂಪ್ ಮಾಡುವುದಿಲ್ಲ. ಪ್ರಸಕ್ತ ಇಲ್ಲಿ ಒಣ ಕಸವನ್ನು ಮಾತ್ರ ಡಂಪ್ ಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳ ಸಹಿತ ಪುರಸಭೆ ಅಧಿಕಾರಿಗಳು ಭರವಸೆ ನೀಡಿ ಪ್ರತಿಭಟನಾಕಾರರನ್ನು ಮನವೊಲಿಸಿದ್ದರು.

ಬುಧವಾರ ಪ್ರತಿಭಟನೆಯ ನಡುವೆಯೂ ಹಸಿ ಸುಳ್ಳು ಹೇಳಿದ ಪುರಸಭೆ ಅಧಿಕಾರಿಗಳು ಘಟಕದಲ್ಲಿ ಹಸಿ ಕಸವನ್ನೇ ಡಂಪ್ ಮಾಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಘಟಕದ ಒಳಗೆ ಪ್ರವೇಶಿಸಲು ಪ್ರತಿಭಟನಾಕಾರರಿಗೆ ಮತ್ತು ಪತ್ರಕರ್ತರಿಗೆ ಅವಕಾಶ ನೀಡಿರಲಿಲ್ಲ. ಹೀಗಾಗಿ ಘಟಕದಲ್ಲಿ ಹಸಿ ಕಸ ಡಂಪ್ ಮಾಡಿರುವ ವಿಷಯ ಗೌಪ್ಯವಾಗಿತ್ತು.

ಗುರುವಾರ ಮತ್ತೆ ಕಸ ತುಂಬಿ ಬಂದ ಲಾರಿಯನ್ನು ಡಂಪಿಂಗ್ ಯಾರ್ಡ್ ಪ್ರವೇಶ ದ್ವಾರದಲ್ಲಿ ಗ್ರಾಪಂ ಅಧ್ಯಕ್ಷ ಮುಹಮ್ಮದ್ ನಾಸಿರ್ ನೇತೃತ್ವದಲ್ಲಿ ಗ್ರಾಮಸ್ಥರು ತಡೆದು ನಿಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರ ಮನವೊಲಿಸಲು ಮುಂದಾದ ಪೊಲೀಸರು ಘಟಕದಲ್ಲಿ ಒಣ ಕಸ ಹಾಕುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ತಿಳಿಸಿದರು. ಅಲ್ಲದೆ ಕಸವನ್ನು ಪರಿಶೀಲಿಸಲು ಖುದ್ದು ಪುರಸಭೆಯ ಅಧಿಕಾರಿಗಳು ಘಟಕದ ಒಳಗೆ ಗ್ರಾಪಂ ಅಧ್ಯಕ್ಷ ಮುಹಮ್ಮದ್ ನಾಸಿರ್ ಸಹಿತ ಸ್ಥಳೀಯರನ್ನು ಕರೆದುಕೊಂಡು ಹೋದರು. ಅದರಂತೆ ಬುಧವಾರ ಮತ್ತು ಗುರುವಾರ ಡಂಪ್ ಮಾಡಿದ ಕಸವನ್ನು ಪರಿಶೀಲಿಸಿದಾಗ ಯಾವುದೇ ಒಣ ಕಸ ಇರದೆ ಹೊಟೇಲ್, ಮನೆಗಳ ತ್ಯಾಜ್ಯ, ಕೂದಲು, ಎಲುಬುಗಳ ತುಂಡು ಸಹಿತ ಸಂಪೂರ್ಣ ಹಸಿ ಕಸವೇ ತುಂಬಿ ಗಬ್ಬು ವಾಸನೆ ಬೀರುತ್ತಿತ್ತು. ಪುರಸಭೆ ಅಧಿಕಾರಿಗಳು ಪೊಲೀಸರಿಗೆ ಕೂಡಾ ಒಣ ಕಸ ಎಂದು ಸುಳ್ಳು ಮಾಹಿತಿ ನೀಡಿ ಹಸಿ ಕಸ ಡಂಪ್ ಮಾಡಿರುವುದು ಪೊಲೀಸರನ್ನೂ ಕೆರಳಿಸಿತು.

ಒಣ ಕಸವೆಂದು ಸುಳ್ಳು ಹೇಳಿ ಹಸಿ ಕಸ ಡಂಪ್ ಮಾಡಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊರನ್ನು ಗ್ರಾಮಸ್ಥರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರಲ್ಲದೆ, ಧಿಕ್ಕಾರ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಗಲಿಬಿಲಿಗೊಂಡ ಮುಖ್ಯಾಧಿಕಾರಿ ಕೂಡಲೇ ಸ್ಥಳದಿಂದ ನಿರ್ಗಮಿಸಿ ಕುಕ್ಕಾಜೆ ಮಾರ್ಗವಾಗಿ ಬಂಟ್ವಾಳಕ್ಕೆ ತೆರಳಿದರು.

ಪೊಲೀಸ್ ಭದ್ರತೆ ಎಷ್ಟು ದಿನ?

ಕಂಚಿನಡ್ಕ ಡಂಪಿಂಗ್ ಯಾರ್ಡ್‌ನಲ್ಲಿ ಬುಧವಾರ ಮತ್ತು ಗುರುವಾರ ಬಿಗಿ ಪೊಲೀಸ್ ಭದ್ರತೆಯಲ್ಲಿ ತ್ಯಾಜ್ಯವನ್ನು ಡಂಪ್ ಮಾಡಲಾಗಿದೆ. ಘಟಕದಲ್ಲಿ ವೈಜ್ಞಾನಿಕ ವ್ಯವಸ್ಥೆ ಹಾಗೂ ಸ್ಥಳೀಯರ ಬೇಡಿಕೆಗಳನ್ನು ಈಡೇರಿಸುವವರೆಗೆ ತ್ಯಾಜ್ಯ ಹಾಕಲು ನಮ್ಮ ವಿರೋಧ ಇದೆ. ಅದರ ವಿರುದ್ಧ ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ಪಟ್ಟು ಹಿಡಿದಿದ್ದಾರೆ. ಪುರಸಭೆಯಿಂದ ಸ್ಥಳೀಯರ ಬೇಡಿಕೆ ಈಡೇರಿಸುವುದು ಮತ್ತು ಘಟಕದಲ್ಲಿ ವೈಜ್ಞಾನಿಕ ವ್ಯವಸ್ಥೆ ಮಾಡುವುದು ಕನಸಿನ ಮಾತು. ಹೀಗಾದರೆ ವರ್ಷ ಪೂರ್ತಿ ಪೊಲೀಸ್ ಭದ್ರತೆ ನೀಡಲು ಸಾಧ್ಯವೇ? ಎಂಬ ಪ್ರಶ್ನೆ ಮೂಡಿದೆ.

ಯಾವುದು ಒಣ ಕಸ, ಯಾವುದು ಹಸಿ ಕಸ?

ಪ್ಲಾಸ್ಟಿಕ್, ಫೈಬರ್, ಕಬ್ಬಿಣ, ಬಾಟಲಿಗಳು, ಗಾಜು ಸಹಿತ ಸುಮಾರು ತಿಂಗಳಿಗೂ ಅಧಿಕ ದಿನಗಳು ಮನೆಯೊಳಗೆ ಅಥವಾ ಮನೆಯ ಹೊರಗೆ ಶೇಕರಿಸಿ ಇಟ್ಟು ಮತ್ತೆ ವಿಲೇವಾರಿ ಮಾಡುವ ವಸ್ತುಗಳು ಒಣ ಕಸದ ಗುಂಪಿಗೆ ಸೇರುತ್ತದೆ. ತರಕಾರಿ, ಆಹಾರ ಪದಾರ್ಥ, ಮಕ್ಕಳ ಪ್ಯಾಂಪರ್ಸ್‌ ಸಹಿತ ಮನೆಯೊಳಗೆ ಅಥವಾ ಮನೆ ಹೊರಗೆ ಒಂದು ದಿನಕ್ಕಿಂತ ಹೆಚ್ಚು ದಿನ ಶೇಖರಿಸಿ ಇಡಲು ಸಾಧ್ಯವಿಲ್ಲದ ತ್ಯಾಜ್ಯಗಳು ಹಸಿ ಕಸದ ಗುಂಪಿಗೆ ಸೇರುತ್ತದೆ. ಕಂಚಿನಡ್ಕ ಡಂಪಿಂಗ್ ಯಾರ್ಡ್‌ನಲ್ಲಿ ಬುಧವಾರ ಮತ್ತು ಗುರುವಾರ ಡಂಪ್ ಮಾಡಿರುವುದರಲ್ಲಿ ಯಾವುದೇ ಒಣ ಕಸ ಇರದೆ ಸಂಪೂರ್ಣವಾಗಿ ಹಸಿ ಕಸವೇ ತುಂಬಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News