ಕೊರೋನ ವೈರಸ್ ಹಿನ್ನಲೆ: ಸೀಮಿತ ಅವಧಿಯೊಳಗೆ ಶುಕ್ರವಾರದ ಜುಮಾ ನಮಾಝ್ ನಿರ್ವಹಣೆ
Update: 2020-03-20 20:29 IST
ಮಂಗಳೂರು, ಮಾ. 20: ಕೊರೋನ ವೈರಸ್ ಹಿನ್ನಲೆಯಲ್ಲಿ ಸರಕಾರದ ನಿರ್ಬಂಧಕಾಜ್ಞೆ ಮತ್ತು ಖಾಝಿಗಳ ಕರೆ ಹಾಗೂ ರಾಜ್ಯ ವಕ್ಫ್ ಮಂಡಳಿಯ ಮನವಿಯ ಮೇರೆಗೆ ಆರೋಗ್ಯ ಸುರಕ್ಷತೆಯ ನಿಟ್ಟಿನಲ್ಲಿ ನಗರ ಮತ್ತು ಹೊರವಲಯದ ಬಹುತೇಕ ಮಸೀದಿಗಳಲ್ಲಿ ಶುಕ್ರವಾರದ ಜುಮಾ ನಮಾಝ್ ಸೀಮಿತ ಅವಧಿಯೊಳಗೆ ನೆರವೇರಿಸಲಾಯಿತು.
ಸಾಮಾನ್ಯವಾಗಿ ಶುಕ್ರವಾರದ ಜುಮಾ ಖುತ್ಬಾ 1ಗಂಟೆಗೆ ಆರಂಭಗೊಂಡು ಸುಮಾರು 2 ಗಂಟೆಯವರೆಗೆ ನಮಾಝ್ ಮತ್ತು ಮತಪ್ರಭಾಷಣ, ಸೌಹಾರ್ದದ ಸಂದೇಶ ಇತ್ಯಾದಿ ಇರುತ್ತದೆ. ಆದರೆ ಇದೇ ಮೊದಲ ಬಾರಿಗೆ ಆಝಾನ್ ಕರೆ ನೀಡಿದ ಬೆನ್ನಿಗೆ ಖುತ್ಬಾ ಮತ್ತು ನಮಾಝ್ ನಡೆಸಲಾಗಿದೆ ಮತ್ತು ದುಆವನ್ನು ಕೂಡ ಚುಟುಕುಗೊಳಿಸಲಾಗಿತ್ತು. ಕೆಲವು ಮಸೀದಿಗಳಲ್ಲಿ ಕೊರೋನ ವೈರಸ್‌ಗೆ ಸಂಬಂಧಿಸಿ ಮುನ್ನೆಚ್ಚರಿಕೆ ವಹಿಸಬೇಕಾದ ಕ್ರಮಗಳ ಬಗ್ಗೆ ಕೇವಲ ಒಂದೆರಡು ನಿಮಿಷದ ಉಪದೇಶ ನೀಡಲಾಯಿತು ಎಂದು ತಿಳಿದು ಬಂದಿದೆ.