ರಾಜ್ಯಕ್ಕೆ ಹೆಚ್ಚುವರಿ ಪರಿಹಾರ ನೀಡಲು ದ.ಕ.ಜಿಲ್ಲಾ ಕಾಂಗ್ರೆಸ್ ಆಗ್ರಹ
ಮಂಗಳೂರು, ಮಾ.20: ಕೇಂದ್ರ ಸರಕಾರವು ವ್ಯಾಪಾರದಲ್ಲಿ ನಷ್ಟ ಹೊಂದಿದವರಿಗೆ ಮತ್ತು ಕೆಲಸವನ್ನು ಕಳೆದುಕೊಂಡವರಿಗೆ ಹಾಗೂ ಆರ್ಥಿಕ ಮುಗ್ಗಟ್ಟನ್ನು ಎದುರಿಸುವ ಜನಸಾಮಾನ್ಯರಿಗೆ ಪ್ರಧಾನಿ ಆರ್ಥಿಕ ಭರವಸೆ ನೀಡುವುದೊಂದಿಗೆ ರಾಜ್ಯಕ್ಕೆ ಕಾನೂನಾತ್ಮಕವಾಗಿ ಕೊಡಬೇಕಾದ ತೆರಿಗೆ ಹಣ 11 ಸಾವಿರ ಕೋ.ರೂ.ಅಲ್ಲದೆ ಹೆಚ್ಚುವರಿಯಾಗಿ 30 ಸಾವಿರ ಕೋ.ರೂ.ವನ್ನು ಪರಿಹಾರ ರೂಪದಲ್ಲಿ ಬಿಡುಗಡೆ ಮಾಡಲು ಕಾಂಗ್ರೆಸ್ ಆಗ್ರಹಿಸಿದೆ.
ಪಕ್ಷದ ಜಿಲ್ಲಾ ಕಾಂಗ್ರೆಸ್ ವಕ್ತಾರ ಹಾಗೂ ಮನಪಾ ಕಾರ್ಪೊರೇಟರ್ ಎಸಿ ವಿನಯರಾಜ್ ಪತ್ರಿಕಾ ಹೇಳಿಕೆಯೊಂದನ್ನು ನೀಡಿ ಕೊರೋನ ವೈರಸ್ ನಿಗ್ರಹದ ಹಿನ್ನಲೆ ಮತ್ತು ದೇಶದ ಜನತೆಯ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾ.22ರಂದು ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ‘ಜನತಾ ಕರ್ಫ್ಯೂ’ ನಡೆಸಲು ನೀಡಿರುವ ಕರೆಗೆ ಪಕ್ಷದ ಬೆಂಬಲವಿದೆ. ಆದರೆ, ಇದರಿಂದ ಮತ್ತಷ್ಟು ಆರ್ಥಿಕ ಮುಗ್ಗಟ್ಟು ಎದುರಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ದೇಶಾದ್ಯಂತ ವ್ಯಾಪಾರ-ವಹಿವಾಟು ಸ್ಥಗಿತದಿಂದ ಹೊಟೇಲು, ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಅಸಂಘಟಿತ ವಲಯದ ಕಾರ್ಮಿಕರು, ರೈತರು ವ್ಯಾಪಾರವಿಲ್ಲದೆ ಆರ್ಥಿಕ ಮುಗಟ್ಟನ್ನು ಎದುರಿಸುತ್ತಿದ್ದಾರೆ. ಉತ್ಪಾದನೆ ಕಡಿತವಾಗಿರುವುದರಿಂದ ಎಲ್ಲಾ ಸಿಬ್ಬಂದಿ ಮತ್ತು ಕಾರ್ಮಿಕರನ್ನು ರಜೆಯಲ್ಲಿ ಕಳುಹಿಸಲಾಗಿದೆ. ಆಟೊ ರಿಕ್ಷಾ, ಟ್ಯಾಕ್ಸಿ ಚಾಲಕ ಮತ್ತು ಮಾಲಕರು, ಬೀದಿಬದಿ ವ್ಯಾಪಾರಸ್ಥರು, ಕಟ್ಟಡ ಕಾರ್ಮಿಕರು ಕೂಡ ಆರ್ಥಿಕ ತೊಂದರೆಗೆ ಈಡಾಗಿದ್ದಾರೆ. ಪೆಟ್ರೋಲ್, ಡಿಸೇಲ್ ಬೆಲೆ ಗಗನಕ್ಕೇರುತ್ತಿದೆ. ದಿನಸಿ ಸಾಮಾನುಗಳ ಪೂರೈಕೆಯ ಕೊರತೆ ಕಂಡುಬಂದಿದ್ದು ಬೆಲೆ ಹೆಚ್ಚಳವಾಗಿದೆ. ಹೊರ ರಾಜ್ಯಗಳಿಂದ ಬರುವ ಸರಕು ಟ್ರಕ್ಕುಗಳು, ಬಸ್ಸುಗಳು ಸೇವೆಯನ್ನು ಮೊಟಕುಗೊಳಿಸಿವೆ. ಸರಕಾರಿ, ಖಾಸಗಿ ಬಸ್, ರೈಲು, ವಿಮಾನಗಳ ಸೇವೆಯನ್ನು ಭಾಗಶಃ ಸ್ಥಗಿತಗೊಳಿಸಲಾಗಿದೆ. ಕೇಂದ್ರ ಸರಕಾರದ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಸಿಬ್ಬಂದಿಯು ಮನೆಯಿಂದ ಕೆಲಸ ಮಾಡಲು ಕರೆ ನೀಡಲಾಗಿದೆ. ಸುಮಾರು 30 ಕೋಟಿ ಕಾರ್ಮಿಕ/ಸಿಬ್ಬಂದಿ ಪಡೆಯನ್ನು (ವರ್ಕ್‌ಫೋರ್ಸ್) ಮನೆಗೆ ಸೀಮಿತಗೊಳಿಸಲಾಗಿದೆ. ಈ ಎಲ್ಲಾ ಕಾರಣಗಳಿಂದ ಆರ್ಥಿಕ ವಹಿವಾಟು ಸಂಪೂರ್ಣ ಸ್ತಬ್ದವಾಗಿದೆ ಎಂದು ವಿನಯರಾಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆರ್ಥಿಕ ವಲಯ ಸ್ತಬ್ದತೆಯಿಂದ ಜನರ ಆದಾಯಕ್ಕೆ ಕುತ್ತು ಬಂದಿದೆ. ಬ್ಯಾಂಕುಗಳಿಂದ ಸಾಲ ಪಡೆದವರು ಮರುಪಾವತಿ ಮಾಡಲು ಕಷ್ಟಪಡುತ್ತಿದ್ದಾರೆ. ರಜೆಯಲ್ಲಿ ಹೋಗಿರುವ ಸಿಬ್ಬಂದಿ/ಕಾರ್ಮಿಕರಿಗೆ ಪುನಃ ಕೆಲಸ ಸಿಗುತ್ತದೆ ಎಂಬ ಭರವಸೆ ಇಲ್ಲವಾಗಿದೆ. ಅಂಗಡಿ ಮುಂಗಟ್ಟು, ಕೈಗಾರಿಕೆಗಳು ವ್ಯಾಪಾರವಿಲ್ಲದೆ ಮುಚ್ಚಲ್ಪಟ್ಟಿದೆ. ಇಂತಹ ಅಘೋಷಿತ ತುರ್ತು ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರ ಯಾವ ರೀತಿಯಾಗಿ ಆರ್ಥಿಕ ತೊಂದರೆಗೆ ಒಳಪಟ್ಟವರಿಗೆ ಮತ್ತು ಕೆಲಸ ಕಳೆದುಕೊಂಡವರಿಗೆ ಹಾಗೂ ರೋಗ ಭಾದಿತರಿಗೆ ಆರ್ಥಿಕವಾಗಿ ಸ್ಪಂದನೆ ನೀಡುತ್ತದೆ ಎಂದು ವಿನಯರಾಜ್ ಪ್ರಶ್ನಿಸಿದ್ದಾರೆ.