×
Ad

​ಕೊರೋನ ವೈರಸ್ : ಉಡುಪಿ ಆಸ್ಪತ್ರೆಗಳಿಗೆ ಮತ್ತೆ ನಾಲ್ವರು ದಾಖಲು

Update: 2020-03-20 21:06 IST

ಉಡುಪಿ, ಮಾ.20: ಶುಕ್ರವಾರ ಇನ್ನೂ ನಾಲ್ವರು ಶಂಕಿತ ಕೊರೋನ ವೈರಸ್ ಸೋಂಕಿಗಾಗಿ ಉಡುಪಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಇವರೆಲ್ಲರನ್ನೂ ಆಸ್ಪತ್ರೆಯ ಐಸೋಲೆಟೆಡ್ ವಾರ್ಡುಗಳಿಗೆ ಸೇರಿಸಿ, ಅವರ ಗಂಟಲು ದ್ರವಗಳ ಮಾದರಿಗಳನ್ನು ಸಂಗ್ರಹಿಸಿ ಹಾಸನದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಎಚ್‌ಓ) ಡಾ.ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

ಬಹರೈನ್‌ನಿಂದ ಆಗಮಿಸಿದ 48ರ ಹರೆಯದ ವ್ಯಕ್ತಿಯೊಬ್ಬರು ಹಾಗೂ ಸೌದಿಯಿಂದ ಆಗಮಿಸಿದ 23ರ ಹರೆಯದ ಯುವತಿ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರೆ, ಸೌದಿಯಿಂದ ಬಂದ 32ರ ಹರೆಯದ ಯುವಕ ಕುಂದಾಪುರದ ಸರಕಾರಿ ತಾಲೂಕು ಆಸ್ಪತ್ರೆಗೆ ಹಾಗೂ ಆಸ್ಟ್ರೇಲಿಯ ದಿಂದ ಬಂದ 66 ವರ್ಷ ಪ್ರಾಯದ ಹಿರಿಯ ಮಹಿಳೆಯೊಬ್ಬರು ಅಜ್ಜರಕಾಡಿನ ಜಿಲ್ಲಾಸ್ಪತ್ರೆಯ ಪ್ರತ್ಯೇಕಿತ ವಾರ್ಡಿಗೆ ದಾಖಲಾಗಿದ್ದಾರೆ ಎಂದವರು ವಿವರಿಸಿದರು.

ಶಿವಮೊಗ್ಗದಲ್ಲಿರುವ ವೈರಸ್ ಪತ್ತೆ ಕೇಂದ್ರದ ಪ್ರಯೋಗಾಲಯದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬುಧವಾರ ಕಳುಹಿಸಿದ ಐವರು ಹಾಗೂ ಗುರುವಾರ ಕಳುಹಿಸಿದ ಮೂವರು ಶಂಕಿತರು ಸೇರಿ ಒಟ್ಟು ಎಂಟು ಮಂದಿಯ ಸ್ಯಾಂಪಲ್‌ಗಳ ಪರೀಕ್ಷಾ ವರದಿ ಇಂದೂ ನಮ್ಮ ಕೈಸೇರಿಲ್ಲ ಎಂದು ಅವರು ತಿಳಿಸಿದು.

369 ಮಂದಿಯ ತಪಾಸಣೆ:  ವಿದೇಶಗಳಿಂದ ಆಗಮಿಸಿದ ಭಾರತೀಯರ ಕೊರೋನ ವೈರಸ್ ಸೋಂಕಿಗಾಗಿ ಪರೀಕ್ಷೆ ಪ್ರಾರಂಭಗೊಂಡ ಬಳಿಕ ಉಡುಪಿ ಜಿಲ್ಲೆಯ ಒಟ್ಟು 364 ಮಂದಿ ತಪಾಸಣೆಗೆ ಒಳಗಾಗಿದ್ದಾರೆ. ಇವರಲ್ಲಿ 66 ಮಂದಿ ಇಂದು ಒಂದೇ ದಿನದಲ್ಲಿ ತಪಾಸಣೆಗೊಳಗಾದರು ಎಂದವರು ತಿಳಿಸಿದರು.

ಇವರಲ್ಲಿ 69 ಮಂದಿ ನಿಗದಿತ 28 ದಿನಗಳ ನಿರ್ಬಂಧದ ಅವಧಿಯನ್ನು ಪೂರ್ಣಗೊಳಿಸಿದ್ದು, ಸಂಪೂರ್ಣ ಆರೋಗ್ಯದಿಂದಿದ್ದಾರೆ. ಇಂದು ತಪಾಸಣೆಗೊಳಗಾದ 66 ಮಂದಿಯೂ ಸೇರಿದಂತೆ ಒಟ್ಟು 286 ಮಂದಿ ಅವರವರ ಮನೆಗಳಲ್ಲಿ ಕ್ವಾರಂಟೀನ್ ಅವಧಿಯಲ್ಲಿ ನಿಗಾದಲ್ಲಿ ಇದ್ದಾರೆ.

ಇನ್ನು 12 ಮಂದಿ ಜಿಲ್ಲಾಸ್ಪತ್ರೆ, ಮಣಿಪಾಲದ ಕೆಎಂಸಿ ಹಾಗೂ ಕುಂದಾಪುರದ ತಾಲೂಕು ಸರಕಾರಿ ಆಸ್ಪತ್ರೆಯ ಐಸೋಲೆಟೆಡ್ ವಾರ್ಡುಗಳಲ್ಲಿ ವೈದ್ಯರ ತೀವ್ರ ನಿರೀಕ್ಷಣೆಯಲ್ಲಿದ್ದಾರೆ. ಇವರಲ್ಲಿ ಇಂದು ವಾರ್ಡುಗಳಿಗೆ ಸೇರ್ಪಡೆಗೊಂಡ ನಾಲ್ವರೊಂದಿಗೆ ಇನ್ನೂ ಮಾದರಿಯ ಪರೀಕ್ಷಾ ವರದಿ ಕೈಸೇರದ ಎಂಟು ಮಂದಿ ಶಂಕಿತ ಸೋಂಕಿತರಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 28 ಮಂದಿಯ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದಿರುವ ಎಲ್ಲಾ 16 ಮಂದಿಯಲ್ಲಿ ನೆಗೆಟಿವ್ ಆಗಿದೆ. ಇನ್ನುಳಿದ 12 ಮಂದಿ ವರದಿ ನಿರೀಕ್ಷೆಯಲ್ಲಿರುವವರು. ಜಿಲ್ಲೆಯಲ್ಲಿ ಇದುವರೆಗೆ ಯಾರೂ ಸೋಂಕಿತರು ಪತ್ತೆಯಾಗಿಲ್ಲ ಎಂದು ಡಾ. ಸೂಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News