ಕೊರೋನವೈರಸ್ ಹರಡಲು ಬಿಟ್ಟರೆ ಲಕ್ಷಾಂತರ ಜನರನ್ನು ಕೊಲ್ಲಬಲ್ಲದು

Update: 2020-03-20 15:46 GMT

ವಿಶ್ವಸಂಸ್ಥೆ (ನ್ಯೂಯಾರ್ಕ್), ಮಾ. 20: ಕೊರೋನವೈರಸ್ ತಡೆಯಿಲ್ಲದೆ ಹರಡಲು ಬಿಟ್ಟರೆ, ಮುಖ್ಯವಾಗಿ ಬಡ ದೇಶಗಳಲ್ಲಿ ಲಕ್ಷಾಂತರ ಮಂದಿ ಸಾಯಬಹುದು ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಗುರುವಾರ ಹೇಳಿದ್ದಾರೆ ಹಾಗೂ ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಸಂಘಟಿತ ಜಾಗತಿಕ ಹೋರಾಟಕ್ಕಾಗಿ ಕರೆ ನೀಡಿದ್ದಾರೆ.

‘‘ವೈರಸ್ ಕಾಡ್ಗಿಚ್ಚಿನಂತೆ ಹರಡಲು ನಾವು ಅವಕಾಶ ನೀಡಿದರೆ, ಅದರಲ್ಲೂ ವಿಶೇಷವಾಗಿ ಜಗತ್ತಿನ ಅತ್ಯಂತ ಬಡತನದ ಪ್ರದೇಶಗಳಲ್ಲಿ, ಅದು ಲಕ್ಷಾಂತರ ಜನರನ್ನು ಕೊಲ್ಲುತ್ತದೆ’’ ಎಂದು ಗುಟೆರಸ್ ನುಡಿದರು.

‘‘ಜಾಗತಿಕ ಒಗ್ಗಟ್ಟು ನೈತಿಕವಾಗಿ ಅಗತ್ಯ ಮಾತ್ರವಲ್ಲ, ಅದರಲ್ಲಿ ಪ್ರತಿಯೊಬ್ಬನ ಹಿತಾಸಕ್ತಿಯಿದೆ’’ ಎಂದು ಅವರು ಹೇಳಿದರು.

ಈಗಾಗಲೇ 9,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯನ್ನು ಪಡೆದಿರುವ ‘ಆರೋಗ್ಯ ವಿಪತ್ತನ್ನು’ ನಿರ್ವಹಿಸಲು ಸಂಘಟಿತ ಜಾಗತಿಕ ಪ್ರಯತ್ನಗಳ ಅಗತ್ಯವಿದೆ ಎಂದರು.

‘‘ರೋಗವನ್ನು ಎದುರಿಸಲು ಪತ್ರಿಯೊಂದು ದೇಶವೂ ತನ್ನದೇ ಆದ ಆರೋಗ್ಯ ತಂತ್ರೋಪಾಯಗಳನ್ನು ಹೊಂದುವ ವ್ಯವಸ್ಥೆಯಿಂದ ನಾವು ತುರ್ತಾಗಿ ದೂರ ಸರಿಯಬೇಕು ಹಾಗೂ ಬಿಕ್ಕಟ್ಟನ್ನು ಎದುರಿಸಲು ಕಡಿಮೆ ಸಿದ್ಧತೆಗಳನ್ನು ಮಾಡಿಕೊಂಡಿರುವ ದೇಶಗಳಿಗೆ ಸಹಾಯ ಮಾಡುವುದು ಸೇರಿದಂತೆ ಸಂಘಟಿತ ಜಾಗತಿಕ ಪ್ರಯತ್ನಗಳನ್ನು ಹೊಂದುವ ವ್ಯವಸ್ಥೆಯನ್ನು ಬರಮಾಡಿಕೊಳ್ಳಬೇಕು’’ ಎಂದು ಗುಟೆರಸ್ ಕರೆ ನೀಡಿದರು.

ಸಹಾಯಕ್ಕಾಗಿ ಜಿ20 ದೇಶಗಳ ಗುಂಪಿಗೆ ಕರೆ

ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಜಗತ್ತಿಗೆ ಒಡ್ಡಿದ ಸವಾಲನ್ನು ಎದುರಿಸಲು ಸಹಾಯ ಮಾಡುವಂತೆ 20 ದೇಶಗಳು ಗುಂಪಿಗೆ ಕರೆ ನೀಡಿದ್ದಾರೆ.

‘‘ತನ್ನ ನಾಗರಿಕರನ್ನು ಮಾತ್ರ ತಾನು ನಿಭಾಯಿಸುವುದು ಎಂಬ ಚಿಂತನೆಯನ್ನು ಶ್ರೀಮಂತ ದೇಶಗಳು ಕೈಬಿಡಬೇಕು’’ ಎಂದು ಅವರು ಹೇಳಿದರು. ‘‘ಆಫ್ರಿಕದ ದೇಶಗಳ ಬಗ್ಗೆ ಹಾಗೂ ಇತರ ಅಭಿವೃದ್ಧಿಹೊಂದುತ್ತಿರುವ ದೇಶಗಳ ಬಗ್ಗೆ ಜಿ20 ವಿಶೇಷವಾಗಿ ಗಮನ ಹರಿಸಬೇಕು ಎಂಬುದಾಗಿ ನಾನು ಬಲವಾದ ಮನವಿ ಮಾಡುತ್ತೇನೆ’’ ಎಂದು ಗುಟೆರಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News