ಕೊರೊನಾ ವೈರಸ್: ಮುಂಬೈಯಲ್ಲಿ ಮಾರ್ಚ್ 31ರವರೆಗೆ ಕಚೇರಿ ಬಂದ್

Update: 2020-03-20 16:01 GMT

ಮುಂಬೈ, ಮಾ.20: ಕೊರೊನ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಮುಂಬೈಯಲ್ಲಿ ಎಲ್ಲಾ ಕಚೇರಿಗಳನ್ನು, ಅಂಗಡಿಗಳನ್ನು ಮಾರ್ಚ್ 31ರವರೆಗೆ ಮುಚ್ಚಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಘೋಷಿಸಿದ್ದಾರೆ.

ಅಗತ್ಯ ವಸ್ತುಗಳ ಪೂರೈಕೆ ನಿರಾತಂಕವಾಗಿ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕಚೇರಿಗಳನ್ನು ಮುಚ್ಚಿದರೂ ಸಿಬಂದಿಗಳಿಗೆ ವೇತನ ಪಾವತಿಸುವಂತೆ ಅವರು ಸಂಸ್ಥೆಗಳಿಗೆ ಮನವಿ ಮಾಡಿಕೊಂಡರು. ಸಂಕಟಕಾಲ ಬರುತ್ತದೆ ಹೋಗುತ್ತದೆ. ಆದರೆ ನಿಮ್ಮ ಮಾನವೀಯತೆಯನ್ನು ಮುಚ್ಚಬೇಡಿ ಎಂದು ಸಂಸ್ಥೆಗಳ ಮಾಲಕರಿಗೆ ಠಾಕ್ರೆ ಕರೆ ನೀಡಿದರು.

ಮುಂಬೈ, ಪುಣೆ, ಪಿಂಪ್ರಿ, ಚಿಂಚ್‌ವಾಡ್ ಮತ್ತು ನಾಗಪುರದಲ್ಲಿ ಎಲ್ಲಾ ಕಚೇರಿಗಳೂ ಬಂದ್ ಆಗಲಿದ್ದು ಅಗತ್ಯ ಸೇವೆಗಳು ಮುಂದುವರಿಯಲಿವೆ. ಲೋಕಲ್ ರೈಲುಗಳಲ್ಲಿ ಹಾಗೂ ಬಸ್ಸುಗಳಲ್ಲಿ ಜನಸಂದಣಿ ಮುಂದುವರಿದರೆ ಸರಕಾರಿ ಸಾರಿಗೆಯನ್ನು ಸ್ಥಗಿತಗೊಳಿಸುವ ಕಡೆಯ ಮಾರ್ಗದ ಬಗ್ಗೆ ಚಿಂತಿಸಲಾಗುವುದು ಎಂದು ಠಾಕ್ರೆ ಹೇಳಿದ್ದಾರೆ. ಜನತೆ ಅನಗತ್ಯ ಸಂಚಾರವನ್ನು ಕಡಿಮೆಗೊಳಿಸಬೇಕು. ದಿನಸಿ ಸಾಮಾಗ್ರಿಗಳು, ಹಾಲು ಮತ್ತಿತರ ದೈನಂದಿನ ಬಳಕೆಯ ವಸ್ತುಗಳ ಪೂರೈಕೆ ಎಂದಿನಂತೆಯೇ ಮುಂದುವರಿಯಲಿದೆ. ಯವುದಾದರೂ ಇತರ ಸೇವೆ ಮುಂದುವರಿಸುವ ಅಗತ್ಯದ ಬಗ್ಗೆ ಆಯಾ ಜಿಲ್ಲಾಧಿಕಾರಿಗಳು ಸರಕಾರಕ್ಕೆ ಮಾಹಿತಿ ನೀಡಬೇಕು ಎಂದವರು ಸೂಚಿಸಿದರು. ಈ ಮಧ್ಯೆ, ರಾಜ್ಯದಲ್ಲಿ 1ರಿಂದ 8ನೇ ತರಗತಿವರೆಗಿನ ಮಕ್ಕಳಿಗೆ ಪರೀಕ್ಷೆ ಇರುವುದಿಲ್ಲ. 9 ಮತ್ತು 11ನೇ ತರಗತಿಯ ಮಕ್ಕಳಿಗೆ ಎಪ್ರಿಲ್ 15ರ ಬಳಿಕ ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಸಚಿವೆ ವರ್ಷಾ ಗಾಯಕ್ವಾಡ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News