ಜನತಾ ಕರ್ಫ್ಯೂ: ರವಿವಾರ ಪ್ರಯಾಣಿಕ ರೈಲು ಸಂಚಾರ ರದ್ದು
ಹೊಸದಿಲ್ಲಿ, ಮಾ.20: ಮಾರ್ಚ್ 21ರ ಶನಿವಾರ ಮಧ್ಯರಾತ್ರಿಯಿಂದ ಹೊರಡುವ ಎಲ್ಲಾ ಪ್ರಯಾಣಿಕ ರೈಲುಗಳ ಸಂಚಾರವನ್ನು ರದ್ದುಗೊಳಿಸಿರುವುದಾಗಿ ಭಾರತೀಯ ರೈಲ್ವೇ ತಿಳಿಸಿದೆ.
ಮಾರ್ಚ್ 22ರಂದು (ರವಿವಾರ) ಪ್ರಧಾನಿಯ ಕರೆಯಂತೆ ನಡೆಯಲಿರುವ ‘ಜನತಾ ಕರ್ಫ್ಯೂ’ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆಯಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಈಗಾಗಲೇ ಪ್ರಯಾಣ ಆರಂಭಿಸಿರುವ ರೈಲುಗಳು ತಮ್ಮ ನಿಗದಿತ ಗುರಿ(ನಿಲ್ದಾಣ)ಯವರೆಗೆ ಪ್ರಯಾಣ ಮುಂದುವರಿಸಲಿದೆ.
ರವಿವಾರ ಬೆಳಿಗ್ಗೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಿಲ್ದಾಣದಿಂದ ಹೊರಡುವ ದೀರ್ಘ ಪ್ರಯಾಣದ ಮೈಲ್/ಎಕ್ಸ್‌ಪ್ರೆಸ್ ರೈಲು, ಇಂಟರ್‌ಸಿಟಿ ರೈಲುಗಳ ಸಂಚಾರವನ್ನೂ ರದ್ದುಗೊಳಿಸಲಾಗಿದೆ ಎಂದು ಶುಕ್ರವಾರ ರೈಲ್ವೇ ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಗತ್ಯವಿರುವ ಪ್ರಯಾಣಕ್ಕೆ ಮಾತ್ರ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಮುಂಬೈ, ಚೆನ್ನೈ, ಕೋಲ್ಕತಾ, ದಿಲ್ಲಿ ಮತ್ತು ಸಿಕಂದರಾಬಾದ್‌ನಲ್ಲಿ ಉಪನಗರ ರೈಲು ಸೇವೆಗಳನ್ನು ಕನಿಷ್ಟ ಮಟ್ಟಕ್ಕೆ ಇಳಿಸಲಾಗುವುದು.
ರೈಲುಗಳ ರದ್ದತಿಯಿಂದ ಪ್ರಯಾಣಿಕರಿಗೆ ಅನಾನುಕೂಲ ಆಗದಂತೆ ಎಲ್ಲಾ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ಪ್ರಯಾಣದಲ್ಲಿರುವ ರೈಲುಗಳಲ್ಲಿ ಪ್ರಯಾಣಿಸುವವರಿಗೆ ನಿಲ್ದಾಣದಲ್ಲಿ ಆಹಾರ, ನೀರು ಮತ್ತು ತಂಗಲು ವ್ಯವಸ್ಥೆ ಮಾಡುವಂತೆ ಎಲ್ಲಾ ನಿಲ್ದಾಣದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.