ಮಂಗಳೂರು: ರೈಲು ನಿಲ್ದಾಣದಲ್ಲಿ ಬೈಕ್ ಪಾರ್ಕ್ ಮಾಡಿದ ಸವಾರ ನಾಪತ್ತೆ
ಮಂಗಳೂರು, ಮಾ. 20: ನಗರದ ಪಡೀಲ್ ಸಮೀಪದ ಅಳಪೆ ಕರ್ಮಾರ್‌ನಿಂದ ಮಾ.17ರಂದು ಹೊರಟಿದ್ದ ಅಶ್ವಥ್ ಎಂಬವರು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ತನ್ನ ಬೈಕ್ ಇಟ್ಟು ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಮಾ. 17ರಂದು ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ಬೈಕ್‌ನಲ್ಲಿ ಹೊರಟಿದ್ದ ಅಶ್ವಥ್ ನೇರವಾಗಿ ಸೆಂಟ್ರಲ್ ರೈಲು ನಿಲ್ದಾಣಕ್ಕೆ ತೆರಳಿ ಅಲ್ಲಿನ ಪಾರ್ಕಿಂಗ್ ಏರಿಯಾದಲ್ಲಿ ಬೈಕ್ ನಿಲ್ಲಿಸಿದ್ದರು. ಬಳಿಕ ಪಾರ್ಕಿಂಗ್ ಶುಲ್ಕ ಸಂಗ್ರಹಿಸುವ ವ್ಯಕ್ತಿಯ ಬಳಿ ತಾನು 8 ದಿನಗಳ ಬಳಿಕ ಬರುತ್ತೇನೆ ಎನ್ನುತ್ತಾ 8 ದಿನಗಳ ಶುಲ್ಕವನ್ನು ಪಾವತಿಸಿ ತೆರಳಿರುವುದು ಗೊತ್ತಾಗಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಕಂಕನಾಡಿ ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಮೂಲತ: ಕಾಸರಗೋಡಿನ ನಿವಾಸಿಯಾಗಿರುವ ಅಶ್ವಥ್ ಕೇರಳ ಮೂಲದ ಸಿಂಟೆಕ್ಸ್ ಕಂಪೆನಿಯಲ್ಲಿ ಮಾರ್ಕೆಟಿಂಗ್ ಕೆಲಸ ಮಾಡಿಕೊಂಡಿದ್ದು, ನಗರದ ಅಳಪೆಯಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ ಜತೆ ವಾಸವಿದ್ದರು. ಸುಮಾರು 6 ತಿಂಗಳ ಹಿಂದೆಯಷ್ಟೇ ಅವರ ವಿವಾಹ ನಡೆದಿತ್ತು ಎನ್ನಲಾಗಿದೆ.
ಬೈಕನ್ನು ರೈಲು ನಿಲ್ದಾಣದಲ್ಲಿ ನಿಲ್ಲಿಸಿರುವ ಕಾರಣ ಅಶ್ವಥ್ ರೈಲಿನಲ್ಲಿ ಕೇರಳ ಕಡೆಗೆ ಪ್ರಯಾಣಿಸಿರಬಹುದು ಎಂದು ಶಂಕಿಸಲಾಗಿದೆ.