ಕೋವಿಡ್-19 ಆರೋಗ್ಯ ಜಾಗೃತಿ ರಥಕ್ಕೆ ಚಾಲನೆ
ಕಾರ್ಕಳ, ಮಾ.20: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಕಾರ್ಕಳ, ರೋಟರಿ ಕ್ಲಬ್, ಕಾರ್ಕಳ ರಾಕ್ ಸಿಟಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೋವಿಡ್ -19 ಕುರಿತು ಮಾಹಿತಿ ನೀಡುವ ಆರೋಗ್ಯ ಜಾಗೃತಿ ರಥಕ್ಕೆ ಶುಕ್ರವಾರ ಕಾರ್ಕಳ ತಾಲೂಕು ಕಚೇರಿ ಮುಂಭಾಗದಲ್ಲಿ ಚಾಲನೆ ನೀಡಲಾಯಿತು.
ರಥಕ್ಕೆ ಕಾರ್ಕಳ ತಹಶೀಲ್ದಾರ್ ಪುರಂದರ ಹೆಗ್ಡೆ ಮತ್ತು ಕಾರ್ಕಳ ತಾಪಂ ಕಾರ್ಯನಿರ್ವಹಣಾಧಿಕಾರಿ ಮೇಜರ್ ಡಾ.ಹರ್ಷ ಕೆ.ಬಿ ಜಂಟಿಯಾಗಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಪುರಂದರ ಹೆಗ್ಡೆ, ಕೊರೊನಾ ವೈರಸ್ ನಿಯಂತ್ರಣ ತಪ್ಪಿ ಹೋಗುವ ಮುನ್ನವೇ ನಾವೆಲ್ಲಾ ಜಾಗೃತರಾಗುವುದು ಅತ್ಯವಶ್ಯಕ. ನಮ್ಮ ಕಛೇರಿಯಲ್ಲಿ ಕೂಡ ಜನಸಂದಣಿ ಕಡಿಮೆ ಮಾಡಲು ಆಧಾರ್ ನೋಂದಾವಣೆಯನ್ನು ಸ್ಥಗಿತಗೊಳಿ ಸಲಾಗಿದೆ. ಸಾರ್ವಜನಿಕರು ತೀರಾ ಅವಶ್ಯವಿದ್ದಲ್ಲಿ ಮಾತ್ರ ಕಛೇರಿಗೆ ಬರಬೇಕು ಎಂದು ಮನವಿ ಮಾಡಿದರು.
ಡಾ.ಹರ್ಷ ಕೆ.ಬಿ ಮಾತನಾಡಿ, ಪ್ರಸ್ತುತ ನಾವು ಸ್ಟೇಜ್ -2 ಕೊರೊನಾ ಸ್ಥಿತಿಯಲ್ಲಿದ್ದು, ಇನ್ನು 15 ದಿನಗಳ ಅವಕಾಶದಲ್ಲಿ ಸ್ಟೇಜ್ 3 ಸಾಂಕ್ರಮಿಕ ರೋಗಕ್ಕೆ ಹೋಗದಂತೆ ಎಚ್ಚೆತ್ತುಕೊಳ್ಳಲು, ಸರಕಾರ ನಿರ್ದೇಶನದಂತೆ ಮುಂಜಾಗೃತ ಕ್ರಮ ಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ ಮಾತನಾಡಿ, ಈ ರಥವು ಕಾರ್ಕಳ ತಾಲೂಕಿನಾದ್ಯಂತ ಸಂಚರಿಸಿ ಕೋವಿಡ್-19 ಮತ್ತು ಇತರ ಸಾಂಕ್ರಮಿಕ ಕಾಯಿಲೆಗಳ ಬಗ್ಗೆ ಮಾಹಿತಿ ಮತ್ತು ಕರಪತ್ರ ನೀಡುವುದರ ಮುಖಾಂತರ ಜಾಗೃತಿ ಮೂಡಿಸುತ್ತದೆ. ಈ ರಥವು ಮಾ.21ರಂದು ಹಿರ್ಗಾನ, ಅಜೆಕಾರು, ಹೆಬ್ರಿ, ಮುನಿಯಾಲು ಮತ್ತು ದೊಂಡರಂಗಡಿ, ಮಾ.23ರಂದು ನಿಟ್ಟೆ, ಬೆಳ್ಮಣ್, ನಂದಳಿಕೆ, ಸಚ್ಚೇರಿಪೇಟೆ ಮತ್ತು ಇನ್ನ ಹಾಗೂ ಮಾ.24ರಂದು ಇರ್ವತ್ತೂರು, ಈದು, ಬಜಗೋಳಿ, ಮಾಳ ಮತ್ತು ದುರ್ಗಾದಲ್ಲಿ ಸಂಚರಿಸಲಿದೆ ಎಂದು ತಿಳಿಸಿದರು.
ರೋಟರಿ ಕ್ಲಬ್‌ನ ಅಧ್ಯಕ್ಷ ಜಗದೀಶ್, ರಾಕ್ ಸಿಟಿ ಅಧ್ಯಕ್ಷ ಸುರೇಂದ್ರ ನಾಯಕ್, ತಾಲೂಕಿನ ಆರೋಗ್ಯ ಸಂಸ್ಥೆಗಳ ವೈದ್ಯಾಧಿಕಾರಿಗಳು, ತಾಲೂಕು ಕಚೇರಿಯ ಸಿಬ್ಬಂದಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ರ್ಯಾಪಿಡ್ ರೆಸ್ಪಾನ್ಸ್ ಟೀವ್ನ ಸಿಬ್ಬಂದಿ ಉಪಸ್ಥಿತರಿದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಎಚ್. ಕಾರ್ಯಕ್ರಮ ನಿರ್ವಹಿಸಿದರು.