ಹರೇಕಳದಲ್ಲಿ 172 ಕೋಟಿ ರೂ. ವೆಚ್ಚದಲ್ಲಿ ಅಣೆಕಟ್ಟು ಸಹಿತ ಸೇತುವೆಗೆ ಶಿಲಾನ್ಯಾಸ

Update: 2020-03-21 14:17 GMT

ಕೊಣಾಜೆ: ಈ ಅಣೆಕಟ್ಟು ಸೇತುವೆ ನಿರ್ಮಾಣವಾದರೆ ಈ ಭಾಗದ ಜನರ ಬಹುಕಾಲದ ಕನಸು ನನಸಾಗಲಿದೆ. ಈ ಸೇತುವೆ, ಅಣೆಕಟ್ಟು ನಿರ್ಮಾಣದಿಂದ ಈ ಭಾಗದ ಜನರಿಗೆ ನಗರ ಸಂಪರ್ಕ ಹಾಗೂ ಈ ವ್ಯಾಪ್ತಿಯಲ್ಲಿ ಮುಂದಿನ ಮೂವತ್ತು ವರ್ಷಗಳ ಕಾಲ ನೀರಿನ ಸಮಸ್ಯೆ ಕಾಣಲು ಸಾಧ್ಯವಿಲ್ಲ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.

ಅವರು ಮಂಗಳೂರು ವಿಧಾನಸಭಾ ವ್ಯಾಪ್ತಿಯ ಹರೇಕಳ ಕಡವಿನ ಬಳಿಯಲ್ಲಿ ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ದಿ ಇಲಾಖೆ ವತಿಯಿಂದ ನೇತ್ರಾವತಿ ನದಿಗೆ ರೂ.174 ಕೋಟಿ ರೂ ವೆಚ್ಚದಲ್ಲಿ ಸೇತುವೆ ಸಹಿತ ಉಪ್ಪು ನೀರು ತಡೆ ಅಣೆಕಟ್ಟು ನಿರ್ಮಾಣ ಕಾಮಗಾರಿ ಯೋಜನೆಗೆ ಶನಿವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಈ ಸೇತುವೆ ಯಾವಾಗ ಆಗಲಿಕ್ಕೆ ಕೆಲವರು ಈ ಯೋಜನೆಯನ್ನು ಕುಟುಕಿದ್ದರು. ಆದರೆ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಇದೀಗ ಈ ಕಾಮಗಾರಿಗೆ ಶಿಲಾನ್ಯಾಸ‌ ನೆರವೇರಿಸಿರುವುದು ತೃಪ್ತಿ ತಂದಿದೆ. ಮುಂದಿನ ದಿನಗಳಲ್ಲಿ ಪ್ರವಾಸ ಕೇಂದ್ರವಾಗಿಯೂ ಈ ಪ್ರದೇಶವನ್ನು ರೂಪುಗೊಳಿಸಲು ಅವಕಾಶವಿದೆ. ಅಲ್ಲದೆ ಜನರಿಗೆ ಈ ಭಾಗದಿಂದ ನಗರಕ್ಕೆ ಸಂಚರಿಸಲು ಈ‌ ಸೇತುವೆ ನಿರ್ಮಾಣದಿಂದ ಸಹಕಾರಿಯಾಗಲಿದೆ ಎಂದರು.

ಬಹುಗ್ರಾಮ ಕುಡಿಯುವ ನೀರು ಯೋಜನೆಯ ಮೂಲಕ ಮುಂದಿನ ಎರಡು ವರ್ಷಗಳಲ್ಲಿ ಮನೆ ಮನೆಗಳಿಗೆ ನೀರು ಬರಲಿದೆ. ಅಲ್ಲದೆ ಉಳ್ಳಾಲ ತಾಲೂಕು ನಿರ್ಮಾಣದಿಂದ ಈ ಭಾಗದಲ್ಲಿ ಹಲವಾರು ಅಭಿವೃದ್ಧಿ ಚಟುವಟಿಕೆಗಳು ಆಗಲಿದೆ ಎಂದು ಅವರು ಹೇಳಿದರು.

ಮಾಜಿ ಸಚಿವ ರಮಾನಾಥ ರೈ, ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಪಶ್ಚಿಮವಾಹಿನಿ ಯೋಜನೆ ನಮ್ಮ ಜಿಲ್ಲೆಗೆ ಬರಬೇಕು ಎನ್ನುವ ಬೇಡಿಕೆ ಬಹಳ ವರ್ಷಗಳಿಂದ ಇತ್ತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಚಿವ ಸಂಪುಟದಲ್ಲಿ ಅನುಮೋದನೆಗೊಂಡು ಇದೀಗ ಶಿಲಾನ್ಯಾಸ ನಡೆಯುತ್ತಿದ್ದೆ. ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಇಲ್ಲಿಗೆ ತರುವಲ್ಲಿ ಯು.ಟಿ.ಖಾದರ್ ಅವರ ಪಾತ್ರ ಪ್ರಮುಖವಾದುದು. ಈ ಯೋಜನೆಯಿಂದ ಈ ಭಾಗದ ಜನರಿಗೆ ಬಹಳಷ್ಟು‌ ಅನುಕೂಲವಾಗಲಿದೆ ಎಂದರು.

ಮಂಗಳೂರು ತಾಲೂಕು ಪಂಚಾಯತಿ ಅಧ್ಯಕ್ಷ ಮಹಮ್ಮದ್ ಮೋನು, ಹರೇಕಳ ಗ್ರಾಮ ಪಂಚಾಯತಿ ಅದ್ಯಕ್ಷರಾದ ಅನಿತಾ ಡಿಸೋಜ, ಮಾಜಿ ಶಾಸಕ ಮೊಯ್ದಿನ್ ಬಾವ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ, ಹರೇಕಳ ಗ್ರಾಮ ಪಂಚಾಯಿತಿ ಮಹಾಬಲ ಹೆಗ್ಡೆ, ಜಿಲ್ಲಾ ಪಂಚಾಯಿತಿ ಸದಸ್ಯ ಎನ್ ಎಸ್ ಕರೀಂ, ಪದ್ಮಶ್ರೀ ಹರೇಕಳ ಹಾಜಬ್ಬ, ಈಶ್ವರ್ ಉಳ್ಳಾಲ್, ಪೊಲ್ಯ ರಮೇಶ್ ಶೆಟ್ಟಿ, ಸತ್ಯಪಾಲ್ ರೈ ಕಡೆಂಜ, ಅಬುಸಾಲಿ ಕೀನ್ಯ, ಜಬ್ಬಾರ್ ಬೋಳಿಯಾರ್, ಸಿರಾಜ್ ಕಿನ್ಯ, ಮೋಹನ್ ದಾಸ, ಸುರೇಂದ್ರ ಕಂಬಲಿ ಮೊದಲಾದವರು ಉಪಸ್ಥಿತರಿದ್ದರು.

ರವೀಂದ್ರ ರೈ ಹರೇಕಳ ಸ್ವಾಗತಿಸಿದರು. ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮುಸ್ತಫಾ ಹರೇಕಳ ವಂದಿಸಿದರು.

ಇದೇ ಸಂದರ್ಭದಲ್ಲಿ ಕೋರೋನ ಬಗ್ಗೆ ಜಾಗೃತಿ‌ ಮೂಡಿಸುವ ಕರಪತ್ರವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

ಉಪ್ಪು ನೀರು ತಡೆಯುವ ಕಿಂಡಿ‌ ಅಣೆಕಟ್ಟು ಯೋಜನೆ
ನೇತ್ರಾವತಿ ನದಿಗೆ ಹರೇಕಳದಿಂದ ತುಂಬೆ ಯವರೆಗೆ ಸುಮಾರು 5 ಕಿಲೋ ಮೀಟರ್ ಉದ್ದ ಹಾಗೂ 800 ಮೀಟರ್ ಅಗಲ ಮತ್ತು ಐದು ಮೀಟರ್ ಎತ್ತರದಲ್ಲಿ ಈ ಕಿಂಡಿ ಅಣೆಕಟ್ಟು ಮತ್ತು ಸೇತುವೆ ನಿರ್ಮಾಣಗೊಳ್ಳಲಿದೆ. ಅಲ್ಲದೆ ಈ ಅಣೆಕಟ್ಟು ನಿರ್ಮಾಣದಿಂದ‌ ಉಪ್ಪು‌ ನೀರು‌ತಡೆದು ಸಿಹಿ‌ನೀರು ಸಂಗ್ರಹವೂ ಈ ಅಣೆಕಟ್ಟಿನಿಂದ ಆಗಲಿದ್ದು‌ ಇದರಿಂದ ಈ ಭಾಗದ‌‌ ಜನರಿಗೆ, ಕೃಷಿಕರಿಗೆ ಬಹಳಷ್ಡು ಅನುಕೂಲವಾಗಲಿದೆ.
ಕಳೆದ‌ ಹಲವಾರು ವರ್ಷಗಳಿಂದ ಕೃಷಿ ಜಮೀನು ಇದ್ದರೂ ಈ ಭಾಗದ ರೈತರು ಉಪ್ಪು‌ ನೀರಿನ ಪರಿಣಾಮ ರೈತರು ತೊಂದರೆಯನ್ನೆದುರಿಸುತ್ತಿದ್ದರು.ಇದೀಗ ಅಣೆಕಟ್ಟು ನಿರ್ಮಾಣದಿಂದ ಸಿಹಿನೀರು ಸಂಗ್ರಹವಾಗಿ ಕೃಷಿಕರಿಗೆ ಸಹಕಾರಿಯಾಗಲಿದೆ.

174 ಕೋಟಿ ವೆಚ್ಚದಲ್ಲಿ ನಿರ್ಮಾಣ
ಸೇತುವೆ ನಿರ್ಮಾಣ ಯೋಜನೆಯು 174 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿದೆ. ಈ ಯೋಜನೆಯು ಎರಡು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಜೊತೆಗೆ ಹರೇಕಳದಿಂದ ತುಂಬೆಗೆ ಸಂಪರ್ಕ ಕಲ್ಪಿಸುವ ಪ್ರಮುಖವಾಗಿ ಲಘು ವಾಹನಗಳಿಗೆ ಸಂಚಾರಕ್ಕೆ ಅನುಕೂಲವಾಗುವಂತೆ ಏಳುವರೇ ಮೀಟರ್ ಅಗಲವಾದ ರಸ್ತೆ ಹಾಗೂ ಪಾದಚಾರಿಗಳಿಗೆ ನಡೆಯಲು ಇಕ್ಕೆಲಗಳಲ್ಲಿ ಸುಮಾರು ಒಂದುವರೇ ಮೀಟರ್ ಅಗಲದ ಕಾಲುದಾರಿಯೂ ನಿರ್ಮಾಣವಾಗಲಿದೆ. ಇದರಿಂದಾಗಿ ಹರೇಕಳದಿಂದ ಕೊಣಾಜೆ ಮಾರ್ಗವಾಗಿ ಮಂಗಳೂರಿಗೆ ಹೋಗುತ್ತಿದ್ದ ಜನರಿಗೆ ಇದೀಗ ಈ ಸೇತುವೆಯಿಂದಾಗಿ ನೇರವಾಗಿ ಅಡ್ಯಾರ್ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ವ್ಯವಸ್ಥೆ ಆಗಲಿದೆ.

'ಒಂದು ವಾರ ಮಂಗಳೂರಿಗೆ ಹೋಗಬೇಡಿ'
ಕೊರೋನ ಹಾವಳಿ ದಿನದಿಂದ ದಿನಕ್ಕೆ ವಿಪರೀತ ಆಗುತ್ತಿದೆ. ಅದ್ದರಿಂದ ಯಾರೂ ಕೂಡಾ ಮಂಗಳೂರು ನಗರಕ್ಕೆ ಹೋಗಬೇಡಿ, ಅಲ್ಲದೆ ದೂರದ ಊರಿನಿಂದ ಯಾರಾದರೂ‌ ನಮ್ಮ ಊರಿಗೆ ಬಂದರೆ ಅವರ ಮೇಲೆ ನಿಗಾವಹಿಸಿ. ಜನತಾ ಕರ್ಫ್ಯೂವಿಗೆ ಎಲ್ಲರೂ ಬೆಂಬಲಿಸಿ
- ಯು.ಟಿ.ಖಾದರ್, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News