×
Ad

ಕೊರೋನ ವೈರಸ್: ಉಡುಪಿಯಲ್ಲಿ ಇನ್ನೂ ಮೂವರು ಶಂಕಿತರು ಆಸ್ಪತ್ರೆಗೆ ದಾಖಲು

Update: 2020-03-21 19:54 IST

ಉಡುಪಿ, ಮಾ.21: ನೋವೆಲ್ ಕೊರೋನ ವೈರಸ್ (ಕೋವಿಡ್ 19) ಸೋಂಕನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ನಿರಂತರ ಪರಿಶ್ರಮ ಪಡುತ್ತಿರುವ ಬೆನ್ನಲ್ಲೇ ಇಂದು ಇನ್ನೂ ಮೂವರು ಶಂಕಿತ ಕೋವಿಡ್-19ರ ಸೋಂಕಿನ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ದುಬೈಯಿಂದ ಆಗಮಿಸಿದ ಹಿರಿಯಡ್ಕ ಸಮೀಪದ 34ರ ಹರೆಯದ ಯುವಕ ಹಾಗೂ ಆಸ್ಟ್ರೇಲಿಯಕ್ಕೆ ಭೇಟಿ ನೀಡಿ ಆಗಮಿಸಿದ ಕಾರ್ಕಳ ತಾಲೂಕಿನ 66ರ ಹರೆಯದ ಹಿರಿಯ ವ್ಯಕ್ತಿ ಕೊರೋನ ಸೋಂಕಿನ ಲಕ್ಷಣದೊಂದಿಗೆ ಶನಿವಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಇವರಿಬ್ಬರ ಗಂಟಲು ದ್ರವದ ಮಾದರಿಯನ್ನು ಹಾಸನಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದವರು ತಿಳಿಸಿದರು.

ಇವರೊಂದಿಗೆ ವಿದೇಶಕ್ಕೆ ತೆರಳಿದ ಇತಿಹಾಸವೇ ಇಲ್ಲದ ಕಲ್ಯಾಣಪುರದ 15ರ ಹರೆಯದ ಬಾಲಕಿ ತೀವ್ರತರದ ಉಸಿರಾಟ ತೊಂದರೆಗಾಗಿ ಉಡುಪಿಯ ಲಂಬಾರ್ಡ್ ಆಸ್ಪತ್ರೆಗೆ (ಮಿಷನ್ ಆಸ್ಪತ್ರೆ)ದಾಖಲಾಗಿದ್ದು, ಕೇಂದ್ರ ಸರಕಾರದ ಪರಿಷ್ಕೃತ ಕೊರೋನಾ ವೈರಸ್ ಮಾರ್ಗಸೂಚಿಯಂತೆ ಆಕೆಯ ಗಂಟಲುದ್ರವದ ಮಾದರಿಯನ್ನೂ ಪಡೆದು ಪರೀಕ್ಷೆಗಾಗಿ ಹಾಸನಕ್ಕೆ ಕಳುಹಿಸಲಾಗಿದೆ ಎಂದು ಡಾ.ಸೂಡ ತಿಳಿಸಿದರು.

 ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಬಾಕಿ ಇರುವ 12 ಮಂದಿ ಶಂಕಿತ ಸೋಂಕಿತರ ಮಾದರಿ ಪರೀಕ್ಷೆಗಳಲ್ಲಿ ಐವರ ವರದಿ ಶನಿವಾರ ಬಂದಿದ್ದು, ಎಲ್ಲಾ ನೆಗೆಟಿವ್ ಆಗಿದೆ. ಇವರಲ್ಲಿ ಹಾಸನಕ್ಕೆ ಕಳುಹಿಸಿದ ನಾಲ್ವರ ಹಾಗೂ ಶಿವಮೊಗ್ಗದಿಂದ ಒಬ್ಬರ ವರದಿ ಬಂದಿದೆ. ಹೀಗಾಗಿ ಬುಧವಾರ ಮತ್ತು ಗುರುವಾರ ಶಿವಮೊಗ್ಗಕ್ಕೆ ಕಳುಹಿಸಿದ ಏಳು ಮಂದಿಯ ಪರೀಕ್ಷಾ ವರದಿ ಇನ್ನೂ ಬರಬೇಕಿದೆ. ಈ ಮೂಲಕ ಒಟ್ಟಾರೆಯಾಗಿ ಉಡುಪಿಯಿಂದ ಒಟ್ಟು 10 ಮಂದಿಯ (ಇಂದು ಕಳುಹಿಸಿದ ಮೂವರು ಸೇರಿ) ಪರೀಕ್ಷಾ ವರದಿ ಬರಬೇಕಿದೆ ಎಂದರು.

298 ಮಂದಿ ಗೃಹ ನಿಗಾದಲ್ಲಿ: ಉಡುಪಿ ಜಿಲ್ಲೆಯಲ್ಲಿ ಇಂದು 84 ಮಂದಿ ಸೇರಿದಂತೆ ಇದುವರೆಗೆ ಒಟ್ಟು 448 ಮಂದಿ ಕೊರೋನ ವೈರಸ್ ತಪಾಸಣೆಗೊಳಗಾಗಿದ್ದು, ಇವರಲ್ಲಿ 135 ಮಂದಿ 28 ದಿನಗಳ ತೀವ್ರ ನಿಗಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. 298 ಮಂದಿ ಗೃಹ ನಿಗಾದಲ್ಲಿದ್ದಾರೆ. ಆಸ್ಪತ್ರೆಯಲ್ಲಿ 12 ಮಂದಿ ಮಾದರಿ ವರದಿಯ ನಿರೀಕ್ಷೆಯಲ್ಲಿ ಆಸ್ಪತ್ರೆಯಲ್ಲಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 31 ಮಂದಿ ಸೋಂಕಿಗಾಗಿ ಪರೀಕ್ಷೆಗೊಗಾಗಿದ್ದು, ಇವರಲ್ಲಿ 21ಮಂದಿ ವರದಿ ಈವರೆಗೆ ನೆಗೆಟಿವ್ ಆಗಿ ಬಂದಿದೆ. ಇನ್ನು 10 ಮಂದಿಯ ವರದಿಯನ್ನು ಕಾಯಲಾಗುತ್ತಿದೆ ಎಂದು ಡಾ.ಸೂಡ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News