ನಿಷೇಧಾಜ್ಞೆ ಉಲ್ಲಂಘಿಸಿ ಪ್ರಾರ್ಥನಾ ಸಭೆ: ದೇವಸ್ಥಾನ, ಮಸೀದಿ, ಚರ್ಚ್ ವಿರುದ್ಧ ಪ್ರಕರಣ
ತಿರುವನಂತಪುರ, ಮಾ.21: ಕೇರಳದಲ್ಲಿ 12 ಮಂದಿಗೆ ಕೊರೋನ ವೈರಸ್ ಸೋಂಕು ತಗಲಿರುವುದು ದೃಢಪಟ್ಟ ಮರುದಿನವೇ, ಸರಕಾರದ ಆದೇಶವನ್ನು ಉಲ್ಲಂಘಿಸಿ ಪ್ರಾರ್ಥನಾ ಸ್ಥಳಗಳಲ್ಲಿ ಪ್ರಾರ್ಥನೆಗಳನ್ನು ಆಯೋಜಿಸಿದ ಹಾಗೂ ಜನರ ಜಮಾವಣೆಗೆ ಅನುಮತಿ ನೀಡಿದ್ದಕ್ಕಾಗಿ ಪೊಲೀಸರು ಮೂರು ಧಾರ್ಮಿಕ ಸ್ಥಳಗಳ ಆಡಳಿತ ಮಂಡಳಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಒಂದು ದೇವಾಲಯ, ಚರ್ಚ್ ಹಾಗೂ ಮಸೀದಿಗಳ ಆಡಳಿತ ಮಂಡಳಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
‘‘ಇಡುಕ್ಕಿ ಜಿಲ್ಲೆಯ ವಲ್ಲಿಯನ್‌ಕಾವು ದೇವಾಲಯದ ಆಡಳಿತಾಧಿಕಾರಿ ವಿರುದ್ಧ ಪ್ರಕರಣ ದಾಖಲಾಗಿದೆ . ಜಿಲ್ಲಾಡಳಿತವು ಇದಕ್ಕೂ ಮೊದಲು ನಿತ್ಯದ ಪ್ರಾರ್ಥನೆಗಳ ಸಂದರ್ಭದಲ್ಲಿ ದೇವಾಲಯದೊಳಗೆ ಜನರು ಗುಂಪುಗೂಡುವುದರ ವಿರುದ್ಧ ದೇವಾಲಯದ ಅಧಿಕಾರಿಗಳಿಗೆ ಜಿಲ್ಲಾಡಳಿತವು ನೋಟಿಸ್ ಜಾರಿಗೊಳಿಸಿತ್ತು’’ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಮಸೀದಿಯೊಂದರಲ್ಲಿ ಕಟ್ಟುನಿಟ್ಟಿನ ಮುನ್ನೆಚ್ಚರಿಕೆಯ ಹೊರತಾಗಿಯೂ ಪ್ರಾರ್ಥನೆ ನಡೆಸಿದ್ದಕ್ಕಾಗಿ ಅದರ ಆಡಳಿತ ವರ್ಗದ ವಿರುದ್ಧ ಪ್ರಕರಣ ದಾಖಲಾಗಿದೆಯೆಂದು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಮಧ್ಯೆ, ತ್ರಿಶೂರ್ ಜಿಲ್ಲೆಯ ಒಲ್ಲೂರ್‌ನ ಸೈಂಟ್ ಆ್ಯಂಟನಿ ಚರ್ಚ್‌ನಲ್ಲಿಯೂ ಪ್ರಾರ್ಥನೆ ಆಯೋಜಿಸಿದ್ದ ಕ್ರೈಸ್ತ ಪಾದ್ರಿಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಶುಕ್ರವಾರದಂದು, ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿರ್ದೇಶನದ ಹಿನ್ನೆಲೆಯಲ್ಲಿ ಕೇರಳ ಕ್ಯಾಥೊಲಿಕ್ ಬಿಷಪ್ ಮಂಡಳಿ (ಕೆಸಿಬಿಸಿ)ಯು ಕೊರೋನ ವೈರಸ್‌ನ ಹರಡುವುದನ್ನು ತಡೆಯಲು ತನ್ನ ನಿಯಂತ್ರಣದ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ.
ಈ ಮಧ್ಯೆ ಕೇರಳದಲ್ಲಿ ಹಿಂದೂ ದೇವಾಲಯಗಳ ನಿರ್ವಹಣೆಯನ್ನು ನೋಡಿಕೊಳ್ಳುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ)ಯು ಕೊರೋನ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಶನಿವಾರ ನಿರ್ದೇಶನಗಳನ್ನು ಹೊರಡಿಸಿದೆ.
ದೇವಾಲಯಗಳಲ್ಲಿ ತನ್ನ ಎಲ್ಲಾ ಸಿಬ್ಬಂದಿ ಮಾಸ್ಕ್ ಹಾಗೂ ಕೈಗವಸುಗಳನ್ನು ಧರಿಸುವಂತೆ ಹಾಗೂ ಸಾರ್ವಜನಿಕರಿಗೆ ದೇವಾಲಯಗಳ ಸಂದರ್ಶನದ ಸಮಯವನ್ನು ನಿರ್ಬಂಧಿಸಿದೆ.
ಮಾರ್ಚ್ 31ರವರೆಗೂ ಟಿಡಿಬಿಯು ತನ್ನ ಆಡಳಿತದಲ್ಲಿರುವ ದೇವಾಲಯಗಳನ್ನು ಸಂದರ್ಶಿಸುವ ಭಕ್ತರ ಸಂಖ್ಯೆಗೆ ಮಿತಿ ಹೇರಲು ನಿರ್ಧರಿಸಿದೆ.