ಕೊರೋನಾ ಭೀತಿ, ಉದ್ಯೋಗ ನಷ್ಟ: ಮುಂಬೈನಿಂದ ಲಕ್ಷಾಂತರ ವಲಸಿಗ ಕಾರ್ಮಿಕರ ‘ಪಲಾಯನ’

Update: 2020-03-21 16:31 GMT

ಮುಂಬೈ, ಮಾ.21: ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ಸೋಂಕಿನ ಪ್ರಕರಣಗಳು ಭಾರೀ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ದೇಶದ ವಾಣಿಜ್ಯ ರಾಜಧಾನಿ ಮುಂಬೈ ತಲ್ಲಣಗೊಂಡಿದೆ. ಕೊರೋನಾ ಭೀತಿ, ಉದ್ಯೋಗ ನಷ್ಟದ ಹಾಗೂ ವೇತನ ಕಡಿತದ ಭೀತಿಯಿಂದ ಲಕ್ಷಾಂತರ ವಲಸಿಗರು ತಮ್ಮ ಊರುಗಳಿಗೆ ಗುಳೇ ಹೋಗುತ್ತಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.

ಮುಂಬೈ ಮಹಾನಗರದ ದೈನಂದಿನ ಚಟುವಟಿಕೆಗಳು ಸುಸೂತ್ರವಾಗಿ ನಡೆಯುವಲ್ಲಿ ವಲಸಿಗರು ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ.

‘‘ಕೊರೋನಾ ಹಾವಳಿಯ ಹಿನ್ನಲೆಯಲ್ಲಿ ವ್ಯಾಪಾರ ಹಾಗೂ ಇತರ ವಾಣಿಜ್ಯ ಚಟುವಟಿಕೆಗಳಿಗೆ ಭಾರೀ ಹೊಡೆತ ಬಿದ್ದಿದ್ದು, ಕಂಪೆನಿಗಳು ಭಾರೀ ನಷ್ಟ ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಹಲವು ಕಂಪೆನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಇನ್ನೂ ಅನೇಕ ಸಂಸ್ಥೆಗಳು ತಮ್ಮ ಉದ್ಯೋಗಿಗಳ ವೇತನದಲ್ಲಿಯೂ ಭಾರೀ ಕಡಿತ ಮಾಡಿವೆ. ಇದರಿಂದಾಗಿ ಉದ್ಯೋಗಿಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆಯಲ್ಲದೆ, ಈ ಮಹಾ ಸೋಂಕು ರೋಗವನ್ನು ಎದುರಿಸಲು ಸ್ಥೈರ್ಯವನ್ನು ಅವರು ಕಳೆದುಕೊಂಡಿದ್ದಾರೆ’’ ಎಂದು ಮುಂಬೈಯ ಕಾರ್ಮಿಕ ಆಯುಕ್ತ ಡಾ. ಮಹೇಂದ್ರ ಕಲ್ಯಾಣ್‌ಕರ್ ತಿಳಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಒಂದು ಯಾವುದೇ ಕಾರ್ಮಿಕನು ರಜೆ ತೆಗೆದುಕೊಂಡಲ್ಲಿ, ಆತನನ್ನು ಉದ್ಯೋಗದಲ್ಲಿದ್ದಾನೆಂದೇ ಪರಿಗಣಿಸಬೇಕು ಹಾಗೂ ಈ ಅವಧಿಯಲ್ಲಿ ಅವರ ವೇತನ ಕಡಿತ ಮಾಡಬಾರದು ಎಂದವರು ಸಂಸ್ಥೆಗಳಿಗೆ ಮನವಿ ಮಾಡಿದರು.

ಈ ಮಧ್ಯೆ ಸಿಎಸ್‌ಟಿ ರೈಲು ನಿಲ್ದಾಣ ಸೇರಿದಂತೆ ಮುಂಬೈ ಮಹಾನಗರದ ಹಲವಾರು ಟರ್ಮಿನಲ್ ಹಾಗೂ ರೈಲು ನಿಲ್ದಾಣಗಳಲ್ಲಿ ಪ್ರತಿ ದಿನವೂ ಸಾವಿರಾರು ಸಂಖ್ಯೆಯ ವಲಸಿಗ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ರೈಲುಗಳನ್ನು ಹಿಡಿಯಲು ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News