ಪ್ರಸ್ತಾವಿತ ಉಷ್ಣ ವಿದ್ಯುತ್ ಸ್ಥಾವರ ಯೋಜನೆ ಕೈಬಿಟ್ಟ ಸರಕಾರ

Update: 2020-03-21 17:00 GMT

ಮೂಡುಬಿದಿರೆ, ಮಾ.21: ಸುಮಾರು ಒಂದು ಲಕ್ಷ ಮೆಗಾ ವ್ಯಾಟ್ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಸಾಧ್ಯವಾಗುವಂತೆ ನಿಡ್ಡೋಡಿ ಗ್ರಾಮದ ಕೊಲತ್ತಾರುಪದವಿನಲ್ಲಿ ಕೇಂದ್ರ ಸರಕಾರವು ಸ್ಥಾಪಿಸಲು ಉದ್ದೇಶಿಸಿದ್ದ ಅಲ್ಟ್ರಾ ಮೆಗಾ ಪವರ್ ಪ್ರಾಜೆಕ್ಟ್‌ಗೆ ಅಗತ್ಯವಿರುವ ಭೂಪ್ರದೇಶವನ್ನು ಸ್ವಾಧೀನ ಸಾಧ್ಯವಾಗದಿರುವ ಕಾರಣ ರಾಜ್ಯ ಸರಕಾರವು ಈ ಯೋಜನೆಯನ್ನು ಕೈಬಿಟ್ಟಿದೆ. ಇದು ನಿಡ್ಡೋಡಿ ಮಾತೃಭೂಮಿ ಸಂರಕ್ಷಣಾ ಹೋರಾಟ ಸಮಿತಿಯ ಹೋರಾಟಕ್ಕೆ ಸಿಕ್ಕ ಜಯ ಹೋರಾಟ ಸಮಿತಿ ತಿಳಿಸಿದೆ.

ನಿಡ್ಡೋಡಿಯ ಗ್ರಾಮದ ಕೊಲತ್ತಾರು ಪದವಿನಲ್ಲಿ ಕಳೆದ ಏಳು ವರ್ಷಗಳ ಹಿಂದೆ ಕೇಂದ್ರ ವಿದ್ಯುತ್ ಪ್ರಾಧಿಕಾರ (Central Electric Authority) ಮತ್ತು ಪವರ್ ಫೈನಾನ್ಸ್ ಕಾರ್ಪೊರೇಶನ್ ಲಿಮಿಟೆಡ್ ಸಹಯೋಗದೊಂದಿಗೆ 4,000 ಮೆಗಾ ವ್ಯಾಟ್ ಮತ್ತು ಅದಕ್ಕೂ ಮೇಲ್ಪಟ್ಟ ಸಾಮರ್ಥ್ಯದ ಕಲ್ಲಿದ್ದಲು ಆಧಾರಿತ ಅಲ್ಟ್ರಾ ಮೆಗಾ ಪವರ್‌ಪ್ರಾಜೆಕ್ಟ್‌ಗಳನ್ನು ಸ್ಥಾಪಿಸಲು ಕೇಂದ್ರ ಸರಕಾರ ಮುಂದಾಗಿತ್ತು. ಅದರಂತೆ 2011ರಲ್ಲಿ ಸೆಂಟ್ರಲ್ ಅಥಾರಿಟಿಯ ಅಧಿಕಾರಿ ಎಂ.ಎಸ್.ಪೂರಿ, ಮಂಗಳೂರು ಸಹಾಯಕ ಆಯುಕ್ತ ಸದಾಶಿವ ಪ್ರಭು, ಕೆಪಿಟಿಸಿಎಲ್‌ನ ಪ್ರಧಾನ ಎಂಜಿನಿಯರ್ ಲಕ್ಷ್ಮಣ್, ಮೆಸ್ಕಾಂ ಎಕ್ಸಿಕ್ಯೂಟ್ ಎಂಜಿನಿಯರ್ ಜಗದೀಶ್, ಕೆಐಡಿಪಿಯ ಭೂಸ್ವಾಧೀನ ಅಧಿಕಾರಿ ನಾಗರಾಜ್ ಮತ್ತು ಅಂದಿನ ತಹಶೀಲ್ದಾರ್ ಸ್ಥಳ ಪರಿಶೀಲನೆಗೆ ಬಂದಿದ್ದರು. ಈ ಸಂದರ್ಭ ಮಾಹಿತಿ ಪಡೆದ ಗ್ರಾಮಸ್ಥರು ಸ್ಥಳದಲ್ಲೇ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಸರಕಾರವು ಈ ಯೋಜನೆಯನ್ನು ಜಾರಿಗೆ ತರುತ್ತದೆ ಎಂದು ಮನಗಂಡ ಗ್ರಾಮಸ್ಥರು ಇದರ ವಿರುದ್ಧ 2012ರಲ್ಲಿ ಮೊದಲ ಪ್ರತಿಭಟನೆ ನಡೆಸಿದರು. ಆ ಬಳಿಕ ನಿಡ್ಡೋಡಿ ಮಾತೃಭೂಮಿ ಸಂರಕ್ಷಣಾ ಹೋರಾಟ ಸಮಿತಿ ರಚಿಸಿ ಅದರ ನೇತೃತ್ವದಲ್ಲಿ ನಿಡ್ಡೋಡಿ ಬಂದ್, ಪಂಜಿನ ಮೆರವಣಿಗೆ, ಉಪವಾಸ, ಪೋಸ್ಟ್ ಕಾರ್ಡ್ ಅಭಿಯಾನದ ಮೂಲಕ ದೊಡ್ಡ ಮಟ್ಟದ ಹೋರಾಟ ನಡೆಸಿ ರಾಜ್ಯ ಮತ್ತು ಕೇಂದ್ರ ಸರಕಾರದ ಗಮನ ಸೆಳೆದಿತ್ತು. ಅಲ್ಲದೆ ಸಮಿತಿಯು 2013ರ ಫೆಬ್ರವರಿ 26ರಂದು ಕರ್ನಾಟಕ ಸರಕಾರಕ್ಕೆ ಇ-ಸ್ಪಂದನ ವ್ಯವಸ್ಥೆಯಡಿ ಮನವಿ ಸಲ್ಲಿಸಿತ್ತು.

ಮನವಿಯನ್ನು ಜನಸ್ಪಂದನ ವೆಬ್‌ಸೈಟ್ ಮೂಲಕ ಪಿಸಿಕೆಎಲ್(ಪವರ್ ಕಂಪೆನಿ ಆಫ್ ಕರ್ನಾಟಕ ಲಿಮಿಟೆಡ್)ಗೆ ವರ್ಗಾಯಿಸಲಾಗಿತ್ತು. 2020ರ ಮಾರ್ಚ್ 16ರಂದು ಪಿಸಿಕೆಎಲ್‌ನ ಅಪರ ನಿರ್ದೇಶಕರು(ಯೋಜನೆಗಳು) ಸಮಿತಿಗೆ ಪತ್ರ ಬರೆದಿದ್ದಾರೆ. ಇದರಲ್ಲಿ ರಾಜ್ಯ ಸರಕಾರದ ಇಂಧನ ಇಲಾಖೆಯು 2019ರ ಎಪ್ರಿಲ್ 14ರಂದು ಕೇಂದ್ರ ಸರಕಾರಕ್ಕೆ ಬರೆದಿರುವ ಪತ್ರದಲ್ಲಿ ಯೋಜನೆಯನ್ನು ಕೈಬಿಡಲಾಗಿದೆ ಎಂದು ಉಲ್ಲೇಖಿಸಿರುವುದಾಗಿ ತಿಳಿಸಿದೆ ಎಂದು ಸಮಿತಿಯ ಪ್ರಕಟನೆ ಹೇಳಿದೆ.

ಕೇಮಾರು ಶ್ರೀ ನಿಡ್ಡೋಡಿ ಮಾತೃಭೂಮಿ ಸಂರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಆಲ್ಫೋನ್ಸ್ ಡಿಸೋಜ, ಕಾರ್ಯಾಧ್ಯಕ್ಷ ಪೂವಪ್ಪಗೌಡ, ಗೌರವಾಧ್ಯಕ್ಷ ಚಾವಡಿಮನೆ ಡಾ.ಜಗನ್ನಾಥ ಶೆಟ್ಟಿ, ಸದಸ್ಯರಾದ ಚಂದಯ್ಯ ಗೌಡ, ಕಿರಣ್ ಮಂಜನಬೈಲು ಭಾಸ್ಕರ ದೇವಸ್ಯ ಹಾಗೂ ಮಾಧವ ಗೌಡ ಈ ಹೋರಾಟದ ಮುಂಚೂಣಿಯಲ್ಲಿದ್ದರು.

ನಿಡ್ಡೋಡಿ ಗ್ರಾಮದಲ್ಲಿ ಕೇಂದ್ರ ಸರಕಾರ ಸ್ಥಾಪಿಸಲುದ್ದೇಶಿಸಿದ್ದ ಮೆಗಾ ಪವರ್ ಪ್ರಾಜೆಕ್ಟ್ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರವನ್ನು ಕೈಬಿಟ್ಟಿರುವುದು ನಮ್ಮ ಹೋರಾಟಕ್ಕೆ ಸಂದ ಜಯವಾಗಿದೆ. ಯೋಜನೆಯ ವಿರುದ್ಧ ಜಾತಿ, ಧರ್ಮ, ಮತ ಹಾಗೂ ಪಕ್ಷರಹಿತ ಹೋರಾಟ ನಡೆದಿತ್ತು. ಸಾಂಘಿಕ ಹೋರಾಟ ಫಲ ನೀಡಿದೆ.

ಆಲ್ಫೋನ್ಸ್ ಡಿಸೋಜ, ನಿಡ್ಡೋಡಿ ಮಾತೃಭೂಮಿ ಸಂರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News