ಕೊರೊನ ವೈರಸ್ ನಿಯಂತ್ರಣಕ್ಕೆ 1 ಕೋಟಿ ರೂ. ಬಿಡುಗಡೆಗೊಳಿಸಿದ ಫಾರೂಕ್ ಅಬ್ದುಲ್ಲಾ

Update: 2020-03-21 17:09 GMT

ಶ್ರೀನಗರ, ಮಾ.21: ಜಮ್ಮು ಮತ್ತು ಕಾಶ್ಮೀರದಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ಕೈಗೊಳ್ಳುವ ಕ್ರಮಗಳಿಗೆ ಪೂರಕವಾಗಿ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹಾಗೂ ಪಕ್ಷದ ಮುಖಂಡ ಹಸ್ನೈನ್ ಮಸೂದಿ ತಲಾ 1 ಕೋಟಿ ರೂ. ಬಿಡುಗಡೆಗೊಳಿಸಿದ್ದಾರೆ ಎಂದು ವರದಿಯಾಗಿದೆ.

ಫಾರೂಕ್ ಅಬ್ದುಲ್ಲಾ ಮತ್ತು ಹಸ್ನೈನ್ ಮಸೂದಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ತಲಾ 1 ಕೋಟಿ ರೂ.ಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಕೊರೊನ ವೈರಸ್ ಸೋಂಕಿನ ನಿಯಂತ್ರಣ ಕಾರ್ಯಕ್ಕೆ ಬಿಡುಗಡೆಗೊಳಿಸಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್‌ನ ವಕ್ತಾರರು ಹೇಳಿದ್ದಾರೆ.

1 ಕೋಟಿ ರೂ.ಯಲ್ಲಿ 50 ಲಕ್ಷ ರೂ.ಯನ್ನು ಶ್ರೀನಗರದ ಎಸ್‌ಕೆಐಎಂಎಸ್‌ಗೆ(ಕಾಶ್ಮೀರ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸಸ್), ಕೇಂದ್ರ ಕಾಶ್ಮೀರದ ಬುದ್‌ಗಾಂವ್ ಮತ್ತು ಗಂಡೇರ್‌ಬಾಲ್ ಜಿಲ್ಲೆಗಳಿಗೆ ತಲಾ 25 ಲಕ್ಷ ಅನುದಾನ ನೀಡಲಾಗುವುದು. ಫಾರೂಕ್ ಅಬ್ದುಲ್ಲಾ ಪ್ರತಿನಿಧಿಸುವ ಶ್ರೀನಗರ ಸಂಸದೀಯ ಕ್ಷೇತ್ರವು ಶ್ರೀನಗರ, ಬುದ್‌ಗಾಂವ್ ಮತ್ತು ಗಂಡೇರ್‌ಬಾಲ್ ಜಿಲ್ಲೆಗಳನ್ನು ವ್ಯಾಪಿಸಿದೆ.

ಅಬ್ದುಲ್ಲಾರ ಸಲಹೆಯಂತೆ ದಕ್ಷಿಣ ಅನಂತ್‌ ನಾಗ್ ಕ್ಷೇತ್ರದ ಸಂಸದ ಹಸ್ನೈನ್ ಮಸೂದಿ ಕೂಡಾ ತಮ್ಮ ಕ್ಷೇತ್ರದಲ್ಲಿ ಕೈಗೊಳ್ಳುವ ಉಪಕ್ರಮಗಳಿಗೆ 1 ಕೋಟಿ ಅನುದಾನ ಬಿಡುಗಡೆಗೊಳಿಸಿದ್ದಾರೆ. ಈ ಮೊತ್ತವನ್ನು ಅನಂತನಾಗ್, ಕುಲ್‌ಗಾಂವ್, ಶೋಪಿಯಾನ್ ಮತ್ತು ಪುಲ್ವಾಮಾ ಜಿಲ್ಲೆಗಳಿಗೆ ಸಮಾನವಾಗಿ ಹಂಚಲಾಗುವುದು ಎಂದು ವಕ್ತಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News