×
Ad

​ಮಾ.22: ಚರ್ಚ್‌ಗಳಲ್ಲಿ ಗಂಟೆ ಬಾರಿಸುವ ಮೂಲಕ ಸೇವಾ ನಿರತರಿಗೆ ಕೃತಜ್ಞತೆ

Update: 2020-03-21 23:34 IST

ಮಂಗಳೂರು, ಮಾ. 21: ಪ್ರಧಾನಿಯ ಕರೆಯ ಮೇರೆಗೆ ಮಾ.22ರಂದು ನಡೆಯುವ ಜನತಾ ಕರ್ಯ್ೂ ಸಂದರ್ಭ ಸಂಜೆ 5 ಗಂಟೆಗೆ ಕೊರೊನಾ ರೋಗಿಗಳ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬಂದಿಗೆ ಕೃತಜ್ಞತೆ ಅರ್ಪಿಸಲು ಕೈ ಚಪ್ಪಾಳೆಯ ಜತೆಗೆ ಮಂಗಳೂರು ಕೆಥೋಲಿಕ್ ಕ್ರೈಸ್ತ ಧರ್ಮಪ್ರಾಂತದ ಎಲ್ಲಾ ಚರ್ಚ್ ಮತ್ತು ಚಾಪೆಲ್‌ಗಳಲ್ಲಿ ಗಂಟೆ ಬಾರಿಸಲಾಗುವುದು ಎಂದು ಧರ್ಮಪ್ರಾಂತದ ಬಿಷಪ್ ರೈ. ರೆ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ತಿಳಿಸಿದ್ದಾರೆ.

ಈ ಬಗ್ಗೆ ಎಲ್ಲಾ ಚರ್ಚ್ ಮತ್ತು ಚಾಪೆಲ್‌ಗಳ ಧರ್ಮಗುರುಗಳಿಗೆ ಬಿಷಪ್ ಸುತ್ತೋಲೆಯನ್ನು ಕಳುಹಿಸಿದ್ದಾರೆ. ಕೊರೊನಾ ವೈರಸ್ ಬಿಕ್ಕಟ್ಟು ಇಡೀ ಜಗತ್ತಿನ ಜನರಲ್ಲಿ ದುಖ:, ಭಯ ಹಾಗೂ ಆತಂಕವನ್ನು ಸೃಷ್ಟಿಸಿದೆ. ಇಂತಹ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಯ್ೂಗೆ ಕರೆ ನೀಡಿದ ಮೇರೆಗೆ ಎಲ್ಲಾ ಜನರು ಮನೆಗಳಲ್ಲಿಯೇ ಇರಬೇಕು. ಹಾಗಾಗಿ ರವಿವಾರ ಚರ್ಚ್‌ಗಳಲ್ಲಿ ಬಲಿ ಪೂಜೆಗಳನ್ನು ನಡೆಸದಿರುವಂತೆ ಹಾಗೂ ಜನರು ಖಾಸಗಿಯಾಗಿ ಪ್ರಾರ್ಥನೆ ಸಲ್ಲಿಸುವುದಕ್ಕೂ ಚರ್ಚ್‌ಗೆ ಭೇಟಿ ನೀಡಬಾರದೆಂದು ಮನವಿ ಮಾಡಿದ್ದಾರೆ.

ಕೊರೊನಾ ರೋಗಿಗಳ ಸೇವೆಯಲ್ಲಿ ವೈದ್ಯರು, ಶುಶ್ರೂಷಕಿಯರು ಮತ್ತು ಅರೆ ವೈದ್ಯಕೀಯ ಸಿಬಂದಿಯು ಜೀವದ ಹಂಗು ತೊರೆದು ಅವಿರತವಾಗಿ ಶ್ರಮಿಸುತ್ತಿದ್ದು, ಅವರಿಗೆ ವೈಯಕ್ತಿಕವಾಗಿ ಕೈಚಪ್ಪಾಳೆಯ ಮೂಲಕ ಕೃತಜ್ಞತೆ ಸಲ್ಲಿಸಬಹುದು. ಆದರೆ ಸಾಂಸ್ಥಿಕವಾಗಿ ಕೃತಜ್ಞತೆ ಸಲ್ಲಿಸಲು ಚರ್ಚ್‌ಗಳ ಗಂಟೆ ಬಾರಿಸುವುದು ಉತ್ತಮ ವಿಧಾನವಾಗಿದೆ. ಹಾಗಾಗಿ ಧರ್ಮಪ್ರಾಂತದ ಎಲ್ಲಾ 124 ಚರ್ಚ್‌ಗಳಲ್ಲಿ ಸಂಜೆ 5 ಗಂಟೆಗೆ ಏಕ ಕಾಲದಲ್ಲಿ ಚರ್ಚ್ ಗಂಟೆ ಬಾರಿಸುವ ಮೂಲಕ ಕೃತಜ್ಞತೆ ಸಲ್ಲಿಸಲಾಗುವುದು ಎಂದಿದ್ದಾರೆ.

ಈ ಸಂದರ್ಭ ವೈದ್ಯಕೀಯ ಸಿಬಂದಿಯ ಸೇವೆಯಲ್ಲದೆ ವಿಮಾನ ಯಾನ ಹಾಗೂ ಸಾರಿಗೆ ಸಂಚಾರ ವ್ಯವಸ್ಥೆಯಲ್ಲೂ ಕೆಲಸ ಮಾಡುವ ಕೆಲಸಗಾರರ ಸೇವೆಯನ್ನೂ ಸ್ಮರಿಸಲಾಗುವುದು ಎಂದು ಬಿಷಪ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News