ಥರ್ಮಲ್‌ಗನ್ ಕೊರತೆಯಿಂದ ಚೆಕ್‌ಪೋಸ್ಟ್ ನಿರ್ಮಾಣಕ್ಕೆ ಅಡ್ಡಿ: ಉಡುಪಿ ಡಿಸಿ ಜಗದೀಶ್
ಉಡುಪಿ, ಮಾ.22: ಉಡುಪಿ ಜಿಲ್ಲೆಯಲ್ಲಿ ಕೊರೋನ ವೈರಸ್ ಸಂಬಂಧ ಟೆಂಪರೇಚರ್ ಪರೀಕ್ಷಿಸುವ ಥರ್ಮಲ್‌ಗನ್‌ಗಳ ಕೊರತೆಯಿಂದಾಗಿ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಗಡಿ ಪ್ರದೇಶದಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲು ಸಮಸ್ಯೆಯಾಗುತ್ತಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಇಂದು ಅಜ್ಜರಕಾಡಿನಲ್ಲಿರುವ ತಮ್ಮ ನಿವಾಸ ದಲ್ಲಿ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದ ಅವರು ತಮ್ಮನ್ನು ಭೇಟಿಯಾದ ಪ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಜಿಲ್ಲೆಯಲ್ಲಿ ಸದ್ಯಕ್ಕೆ ಮಹಾರಾಷ್ಟ್ರದಿಂದ ಬರುವವರಿಗೆ ಶಿರೂರಿನಲ್ಲಿ ಹಾಗೂ ಕೇರಳದಿಂದ ಬರುವವರಿಗೆ ಹೆಜಮಾಡಿ ಟೋಲ್‌ಗೇಟ್ ಬಳಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದೆ. ಉಳಿದಂತೆ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಗಡಿಯಲ್ಲಿ ಚೆಕ್‌ಪೋಸ್ಟ್ ಮಾಡಿಲ್ಲ. ಸದ್ಯ ಜಿಲ್ಲೆಯಲ್ಲಿ ಕೇವಲ ಮೂರು ಥರ್ಮಲ್‌ಗನ್ ಗಳಿದ್ದು, ಅದರಲ್ಲಿ ಎರಡನ್ನು ಎರಡು ಚೆಕ್‌ಪೋಸ್ಟ್‌ಗಳಿಗೆ ಹಾಗೂ ಒಂದನ್ನು ಮಲ್ಪೆ ಮೀನುಗಾರಿಕಾ ಬಂದರಿಗೆ ನೀಡಲಾಗಿದೆ ಎಂದರು.
ಈ ನಿಟ್ಟಿನಲ್ಲಿ ಥರ್ಮಲ್‌ಗನ್ ಒದಗಿಸಿಕೊಡುವಂತೆ ಈಗಾಗಲೇ ಸರಕಾರಕ್ಕೆ ಪ್ರಾಸ್ತಾವನೆ ಕಳುಹಿಸಲಾಗಿದೆ. ಆನ್‌ಲೈನ್‌ನಲ್ಲಿ ಖರೀದಿಸಲು ಅಲ್ಲಿಯೂ ಸಿಗುತ್ತಿಲ್ಲ. ಸರಕಾರದಿಂದ ಥರ್ಮಲ್‌ಗನ್ ಬಂದ ತಕ್ಷಣ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಗಡಿ ಪ್ರದೇಶದಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ತಪಾಸಣೆ ನಡೆಸುವ ಕೆಲಸ ಮಾಡಲಾಗುವುದು ಎಂದು ಅವರು ಹೇಳಿದರು.
ಎನ್‌ಆರ್‌ಐಗಳ ಬಗ್ಗೆ ನಿಗಾ: ಕಾರ್ಕಳ, ಕುಂದಾಪುರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮನೆಯಲ್ಲಿ ನಿರ್ಬಂಧಿ ಸಲ್ಪಟ್ಟ ವಿದೇಶದಿಂದ ಬಂದ ಅನಿವಾಸಿ ಭಾರತೀಯರು ಹೊರಗಡೆ ತಿರುಗಾಡುತ್ತಿರುವ ಬಗ್ಗೆ ಫೋನ್ ಕರೆಗಳು ಬಂದಿದ್ದು, ಈ ಕುರಿತು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮಾಹಿತಿ ನೀಡಿದ್ದೇನೆ. ಅವರು ಪ್ರತಿಯೊಂದು ಪ್ರಕರಣಗಳ ಬಗ್ಗೆಯೂ ನಿಗಾ ವಹಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು.
ಅದೇ ರೀತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮಕರಣಿಕರು, ಕಂದಾಯ ನಿರೀಕ್ಷಕರಿಗೂ ತಮ್ಮ ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿರುವ ವಿದೇಶದಿಂದ ಬಂದವರು ಹೊರಗಡೆ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ನೀಡಲಾಗಿದೆ. ತಹಶೀಲ್ದಾರ್ ಹಾಗೂ ತಾಪಂ ಕಾರ್ಯನಿರ್ವಹಣಾಧಿಕಾರಿಗಳ ಸಭೆ ಕರೆದು ಈ ಕುರಿತ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿ ಲಾಗಿದೆ ಎಂದು ಅವರು ಹೇಳಿದರು.
'ಪ್ರಯೋಗಾಲಯಕ್ಕೆ ಅನುಮತಿಯ ನಿರೀಕ್ಷೆ'
ಕೊರೋನ ವೈರಸ್‌ಗೆ ಸಂಬಂಧಿಸಿ ಪ್ರಯೋಗಾಲಯ ಸ್ಥಾಪನೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆಗಳಿದ್ದು ಕೇವಲ ಸರಕಾರದ ಅನುಮತಿಗಾಗಿ ಕಾಯಲಾಗುತ್ತಿದೆ. ಸರಕಾರದಿಂದ ಅನುಮತಿ ಸಿಕ್ಕಿದ ಕೂಡಲೇ ಪ್ರಯೋಗಾ ಲಯವನ್ನು ಆರಂಭಿಸಲಾಗುವುದು. ಮಣಿಪಾಲದಲ್ಲಿ ಪ್ರಯೋಗಾಲಯ ಸ್ಥಾಪನೆ ಮಾಡಿದರೆ ಸಾಕಷ್ಟು ಅನುಕೂಲವಾಗಲಿದೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡಿದ್ದೇವೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು.
ನಮ್ಮಲ್ಲಿ ಸುರಕ್ಷಿತ ಸಲಕರಣೆಗಳಿಗೆ ಯಾವುದೇ ಕೊರತೆ ಇಲ್ಲ. ಎಲ್ಲ ಆಸ್ಪತ್ರೆಗಳಲ್ಲಿಯೂ ಬೇಕಾದಷ್ಟು ಲಭ್ಯ ಇದೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಯಾವುದೇ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿಲ್ಲ. ಇನ್ನು 10 ಮಂದಿಯ ಪರೀಕ್ಷಾ ವರದಿಗಳು ಶಿವಮೊಗ್ಗ ಮತ್ತು ಹಾಸನ ಪ್ರಯೋಗಾಲಯದಿಂದ ಬರಲು ಬಾಕಿದೆ. ಶಿವಮೊಗ್ಗದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಪ್ರಕರಣಗಳು ಬರುತ್ತಿರುವುದರಿಂದ ನಮ್ಮ ಜಿಲ್ಲೆಯ ಪ್ರಕರಣಗಳ ವರದಿ ಕೈಸೇರಲು ವಿಳಂಬವಾಗುತ್ತಿದೆ. ತುರ್ತು ಹಾಗೂ ಅನುಮಾನ ಇರುವ ಪ್ರಕರಣಗಳನ್ನು ಮಾತ್ರ ಶೀಘ್ರ ಮಾಡಲಾಗುತ್ತದೆ. ಉಳಿದ ಪ್ರಕರಣಗಳನ್ನು ಸರದಿಯಂತೆ ಪರೀಕ್ಷೆ ಮಾಡಿ ಕಳುಹಿಸಲಾಗುತ್ತಿದೆ ಎಂದರು.