ಜನತಾ ಕರ್ಫ್ಯೂವಿಗೆ ಬೆಂಬಲ: ಮಲ್ಪೆ ಬಂದರು, ಬೀಚ್ ಸ್ತಬ್ಧ
ಮಲ್ಪೆ, ಮಾ.22: ಕೊರೋನ ಭೀತಿಯ ಹಿನ್ನೆಲೆಯಲ್ಲಿ ಕರೆ ನೀಡಿರುವ ಜನತಾ ಕರ್ಫ್ಯೂವಿಗೆ ಮಲ್ಪೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಲ್ಪೆ ಮೀನುಗಾರಿಕಾ ಬಂದರು ಹಾಗೂ ಮಲ್ಪೆ ಬೀಚ್ ಸಂಪೂರ್ಣ ಸ್ತಬ್ಧಗೊಂಡಿದೆ.
ಬೆಳಗ್ಗೆಯಿಂದ ಮೀನುಗಾರರು ಮಲ್ಪೆ ಬಂದರಿಗೆ ಹಾಗೂ ಪ್ರವಾಸಿಗರು ಮಲ್ಪೆ ಬೀಚ್‌ಗೆ ಆಗಮಿಸದೆ ಕರ್ಫ್ಯೂಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಅದೇ ರೀತಿ ಮಲ್ಪೆ ಪೇಟೆ ಹಾಗೂ ಮಲ್ಪೆ ಬೀಚ್‌ನಲ್ಲಿರುವ ಅಂಗಡಿ ಮುಗ್ಗಟ್ಟು ಗಳು ಸಂಪೂರ್ಣವಾಗಿ ಬಂದ್ ಮಾಡಿದ್ದವು.
‘ಈಗಾಗಲೇ ಮಲ್ಪೆ ಬಂದರಿನಲ್ಲಿ ಶೇ.35-40ರಷ್ಟು ಬೋಟುಗಳು ಲಂಗಾರು ಹಾಕಿದ್ದು, ಉಳಿದ ಬೋಟುಗಳು ಕಳೆದ ಹಲವು ದಿನಗಳಿಂದ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದೆ. ಮೀನು ಸಾಗಾಟ ಮಾಡುವ ಲಾರಿ, ಟೆಂಪೋ ಸೇರಿ ದಂತೆ ಎಲ್ಲ ವಾಹನಗಳು ಬಂದರಿನಲ್ಲೇ ನಿಲ್ಲಿಸಲಾಗಿದೆ. ಯಾರು ಕೂಡ ಇಂದು ಬಂದರು ಕಡೆ ಸುಳಿದಾಡಿಲ್ಲ’ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ ತಿಳಿಸಿದ್ದಾರೆ.
ಮೀನುಗಾರಿಕೆ ಸ್ಥಗಿತಕ್ಕೆ ಚಿಂತನೆ: ನಾಳೆಯಿಂದ ಮಲ್ಪೆ ಬಂದರಿಗೆ ಮರಳಿ ಬರುವ ಆಳಸಮುದ್ರ ಮೀನುಗಾರಿಕಾ ಬೋಟುಗಳು, ಮತ್ತೆ ಸಮುದ್ರಕ್ಕೆ ತೆರಳದೆ ಕೆಲಕಾಲ ಮೀನುಗಾರಿಕೆಯನ್ನು ಸ್ಥಗಿತಗೊಳಿಸಲು ಮೀನುಗಾರಿಕಾ ಸಂಘಟನೆಗಳು ಚಿಂತನೆ ನಡೆಸುತ್ತಿವೆ.
‘ಕೊರೋನ ಭೀತಿಯಿಂದ ನಾಳೆಯಿಂದ ಬಂದರಿಗೆ ಮರಳುವ ಆಳಸಮುದ್ರ ಮೀನುಗಾರಿಕಾ ಬೋಟುಗಳು ಮತ್ತೆ ಸಮುದ್ರ ಹೋಗದ ಬಗ್ಗೆ ಆಳ ಸಮುದ್ರ ಮೀನುಗಾರರ ಸಂಘ ಈಗಾಗಲೇ ತೀರ್ಮಾನ ತೆಗೆದುಕೊಂಡಿದ್ದು, ಮಾ.23 ರಂದು ನಡೆಯುವ ಮಲ್ಪೆ ಮೀನುಗಾರರ ಸಂಘದ ಸಭೆಯಲ್ಲೂ ಜನರ ಅಭಿಪ್ರಾಯ ಪಡೆದು ಕೆಲ ಸಮಯ ಮೀನುಗಾರಿಕೆಯನ್ನು ಸ್ಥಗಿತಗೊಳಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ ತಿಳಿಸಿದರು.
ಕೊರೋನ ವೈರಸ್‌ಗೆ ಸಂಬಂಧಿಸಿದಂತೆ ಈಗಾಗಲೇ ಬಂದರಿನಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಕಳೆದ ಮೂರು ದಿನಗಳಿಂದ ಬೆಳಗಿನ ಜಾವ 5ಗಂಟೆಯಿಂದ ಬಂದರಿಗೆ ಆಗಮಿಸುವ ಮೀನುಗಾರರಿಗೆ ಕೊರೋನ ವೈರಸ್ ಬಗ್ಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡುವ ಕೆಲಸವನ್ನು ಮಾಡಲಾಗುತ್ತಿದೆ. ಅದೇ ರೀತಿ ಮಾ.21ರಂದು ಇಡೀ ಬಂದರಿನಲ್ಲಿ ಸ್ವಚ್ಛ ಕಾರ್ಯವನ್ನು ಮಾಡಲಾಗಿದೆ ಎಂದು ಅವರು ಹೇಳಿದರು.
ಮಾ.23ರಿಂದ ಬಂದರಿನಲ್ಲಿ ತಪಾಸಣೆ
ಕೊರೋನ ವೈರಸ್‌ಗೆ ಸಂಬಂಧಿಸಿ ಮಾ.23ರಿಂದ ಮಲ್ಪೆ ಬಂದರಿಗೆ ಆಗಮಿಸುವವರನ್ನು ಥರ್ಮಲ್‌ಗನ್ ಮೂಲಕ ತಪಾಸಣೆ ನಡೆಸುವ ಕಾರ್ಯ ಆರಂಭವಾಗಲಿದೆ. ಬಂದರಿನ ಮುಖ್ಯದ್ವಾರದಲ್ಲಿ ನೇಮಕ ಮಾಡಲಾಗಿರುವ ಸಿಬ್ಬಂದಿ ಥರ್ಮಲ್ ಗನ್ ಮೂಲಕ ಬಂದರಿಗೆ ಆಗಮಿಸುವ ವಾಹನ ಚಾಲಕರು, ಮೀನುಗಾರರು ಹಾಗೂ ಸಾರ್ವಜನಿಕರ ಟೆಂಪರೇಚರ್‌ಗಳನ್ನು ಪರೀಕ್ಷೆ ಮಾಡಲಿದ್ದಾರೆ. ಅಲ್ಲದೆ ಪ್ರತಿಯೊಬ್ಬರ ಮಾಹಿತಿ ಕೂಡ ಸಂಗ್ರಹಿಸಲಾಗುತ್ತದೆ. ಯಾವುದೇ ಶಂಕಿತ ಪ್ರಕರಣಗಳು ಕಂಡುಬಂದರೆ ಕೂಡಲೇ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಗಣೇಶ್ ಕೆ. ತಿಳಿಸಿದ್ದಾರೆ.