ಮಂಗಳೂರು: ಮಲೇಶಿಯಾದಿಂದ ವಾಪಸ್ ಬಂದ ಇಬ್ಬರ ತಿರುಗಾಟ
Update: 2020-03-22 19:09 IST
ಮಂಗಳೂರು, ಮಾ. 22: ನಗರದ ದೇರೆಬೈಲ್ ಕೊಂಚಾಡಿಯ ಟೌನ್‌ಶಿಪ್‌ನಲ್ಲಿ ವಾಸಿಸುತ್ತಿದ್ದ ಇಬ್ಬರು ಮಲೇಶಿಯಾಕ್ಕೆ ತೆರಳಿ ಮರಳಿ ಬಂದು ವಿಶೇಷ ನಿಗಾದಲ್ಲಿರುವ ಬದಲು ಸಾರ್ವಜನಿಕವಾಗಿ ತಿರುಗಾಡುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ.
ವಿದೇಶಕ್ಕೆ ತೆರಳಿ ಅಲ್ಲಿಂದ ಮರಳಿರುವ ಈ ಇಬ್ಬರಿಗೆ ನೆಗಡಿ, ಶೀತ ಬಾಧೆಯಿದ್ದರೂ ಕೂಡ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದ ನಮಗೆ ಭಯ, ಭೀತಿಯಾಗುತ್ತಿದೆ ಎಂದು ಟೌನ್ ಶಿಪ್ ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್, ಘಟನೆಯ ಬಗ್ಗೆ ಆರೋಗ್ಯ ಇಲಾಖೆಯ ಗಮನಕ್ಕೆ ಬಂದಿದೆ. ಇವರ ಪರೀಕ್ಷೆಯನಲ್ಲಿ ನೆಗೆಟಿವ್ ಬಂದಿದೆ. ಆದರೂ 14 ದಿನ ನಿಗಾದಲ್ಲಿರುವಂತೆ ಸೂಚಿಸಲಾಗಿದೆ. ಪಾಲಿಕೆ ಕಮಿಷನರ್ ಹಾಗೂ ಆರೋಗ್ಯಾಧಿಕಾರಿ ಗಮನಕ್ಕೂ ತರಲಾಗಿದೆ. ಅವರು ಸಾರ್ವಜನಿಕವಾಗಿ ತಿರುಗಾಡುತ್ತಿರುವುದು ಗೊತ್ತಿಲ್ಲ. ಒಂದು ವೇಳೆ ತಿರುಗಾಡುತ್ತಿದ್ದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದರು.