ಕೊರೋನಾ ಸೋಂಕಿತ ಭಟ್ಕಳಕ್ಕೆ ಬಂದಿಲ್ಲ: ಅಧಿಕಾರಿಗಳಿಂದ ಸ್ಪಷ್ಟನೆ

Update: 2020-03-22 14:44 GMT

ಭಟ್ಕಳ: ಮಾ.19ರಂದು ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿರುವ ಭಟ್ಕಳ ಮೂಲದ ಯುವಕನಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಎಸ್.ಭರತ್ ರವಿವಾರ ತುರ್ತು ಪತ್ರಿಕಾಗೋಷ್ಟಿಯನ್ನು ಕರೆದು ಸ್ಪಷ್ಟನೆ ನೀಡಿದ್ದು, ಸೋಂಕು ದೃಢಪಟ್ಟಿರುವ ಯುವಕ ಭಟ್ಕಳದ ಸಂಪರ್ಕಕ್ಕೆ ಬಂದಿಲ್ಲ. ದುಬೈಯಿಂದ ಮಂಗಳೂರಿಗೆ ಬಂದ ಯುವಕನನ್ನು ನೇರವಾಗಿ ಆಸ್ಪತ್ರೆಗೆ ಸಾಗಿಸಿ ಅಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಆತನೊಂದಿಗೆ ಬಂದಿರುವ ಇತರ ಮೂವರು ಭಟ್ಕಳಿಗರಿಗೆ ಯಾವುದೇ ರೀತಿಯ ಸೋಂಕು ಇಲ್ಲ. ಅವರನ್ನು ಗೃಹಬಂಧನದಲ್ಲಿರಿಸಿ ತೀವ್ರ ನಿಗಾ ಇಡಲಾಗಿದೆ ಎಂದರು. 

ಭಟ್ಕಳದ ಜನರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ಹೊರದೇಶದಿಂದ ಬಂದಿರುವ ಎಲ್ಲರನ್ನೂ ಕೂಡ ಆರೋಗ್ಯ ಇಲಾಖೆಯ ಸಿಬಂದಿಗಳು ದಿನಾಲೂ ಪರಿಶೀಲನೆ ನಡೆಸುತ್ತಿದ್ದಾರೆ. ಎಲ್ಲರೂ ಕೂಡ ತಮ್ಮ ತಮ್ಮ ಆರೋಗ್ಯದ ಬಗ್ಗೆ ಜಾಗೃತಿ ವಹಿಸಿ ಹೊರಗಡೆ ಜನ ಸೇರುವ ಪ್ರದೇಶಗಳಿಗೆ ಹೋಗದೆ ಅಂತರ ಕಾಯ್ದುಕೊಳ್ಳುವಂತೆ ಅವರು ಸೂಚಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಅಶೋಕ್, ತಾಲೂಕಾ ಆರೋಗ್ಯಾಧಿಕಾರಿ ಡಾ.ಮೂರ್ತಿರಾಜ್ ಭಟ್, ತಹಸಿಲ್ದಾರ್ ವಿ.ಪಿ.ಕೊಟ್ರೋಳ್ಳಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News