ಸಂಪೂರ್ಣ ಬಂದ್: ಮಾ.23ರಿಂದ ದ.ಕ.ಜಿಲ್ಲೆಯಲ್ಲಿ ಏನಿದೆ... ಏನಿಲ್ಲ?

Update: 2020-03-22 15:53 GMT

ಮಂಗಳೂರು, ಮಾ.22: ಹೆಚ್ಚುತ್ತಿರುವ ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ರಾಜ್ಯ ಸರಕಾರ ಮಾ.31ರವರೆಗೆ ‘ಲಾಕ್‌ಡೌನ್’ ವಿಧಿಸಿರುವ ಹಿನ್ನಲೆಯಲ್ಲಿ ದ.ಕ.ಜಿಲ್ಲೆಯಲ್ಲಿ ಯಾವ್ಯಾವ ಸೇವೆಗಳು ಲಭ್ಯವಿದೆ ಮತ್ತು ಲಭ್ಯವಿಲ್ಲ ಎಂಬುದರ ಮಾಹಿತಿ ಹೀಗಿವೆ.

ಸಾರಿಗೆ ಸಂಚಾರ ಇಲ್ಲ: ಸರಕಾರಿ, ಖಾಸಗಿ ಬಸ್ಸುಗಳು ಸೇರಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ತಿಂಗಳಾಂತ್ಯದವರೆಗೆ ಸಂಪೂರ್ಣ ಸ್ಥಗಿತವಾಗಲಿದೆ. ಮಾ.31ರವರೆಗೆ ಜಿಲ್ಲೆಯಲ್ಲಿ ಖಾಸಗಿ ಸಿಟಿ ಬಸ್‌ಗಳ ಸಂಚಾರವಿಲ್ಲ ಎಂದು ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಹೇಳಿದ್ದಾರೆ. ಖಾಸಗಿ ಸರ್ವಿಸ್ ಬಸ್ ಓಡಾಟಕ್ಕೆ ಸಂಬಂಧಿಸಿ ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. ಜಿಲ್ಲಾಡಳಿತ ಸೂಚಿಸಿದರೆ ಮತ್ತು ಪರಿಸ್ಥಿತಿ ಸಂಚಾರಕ್ಕೆ ಪೂರಕವಾಗದಿದ್ದರೆ ಸರ್ವಿಸ್ ಬಸ್‌ಗಳನ್ನು ರಸ್ತೆಗಿಳಿಸುವುದಿಲ್ಲ ಎಂದು ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ತಿಳಿಸಿದ್ದಾರೆ.

ಯಾವುದೇ ಕೆಎಸ್ಸಾರ್ಟಿಸಿ ಬಸ್ಸುಗಳು ಸೋಮವಾರ ಸಂಚರಿಸುವುದಿಲ್ಲ. ಮುಂದಿನ ನಿರ್ಧಾರವನ್ನು ಶೀಘ್ರ ಕೈಗೊಳ್ಳಲಾಗುತ್ತದೆ. ಅಲ್ಲದೆ ಎಸಿ ಬಸ್ಸುಗಳು, ಅಂತಾರಾಜ್ಯ ಬಸ್ಸುಗಳ ಸಂಚಾರವನ್ನು ಮಾ.31ರವರೆಗೆ ನಿರ್ಬಂಧಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್ ಕುಮಾರ್ ತಿಳಿಸಿದ್ದಾರೆ.

ಇನ್ನು ರಿಕ್ಷಾ, ಟ್ಯಾಕ್ಸಿ ಸೇವೆಗಳು ಕೂಡ ಜಿಲ್ಲೆಯಲ್ಲಿ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ. ಜನರು ಅಗತ್ಯ ವಸ್ತುಗಳಿಗಾಗಿ ಮಾತ್ರ ಮನೆಯಿಂದ ಹೊರಬರಬೇಕು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆಯನ್ನು ಸಾರ್ವಜನಿಕರಿಗೆ ನೀಡಿದೆ.

ಜಿಲ್ಲೆಯಲ್ಲಿ ಸಾರ್ವಜನಿಕ ಸಂಚಾರ ಸ್ಥಗಿತಗೊಳ್ಳುವುದರಿಂದ ಸಹಜವಾಗಿಯೇ ಅಂಗಡಿಗಳು, ಹೊಟೇಲುಗಳು ಕೂಡ ಬಂದ್ ಆಗುವುದು ನಿಚ್ಛವಾಗಿದೆ. ಆದರೆ ವೈದ್ಯಕೀಯ ಸೇವೆ ಸಹಿತ ತುರ್ತು ಸೇವಾ ಸೌಲಭ್ಯಗಳಾದ ಔಷಧ, ಹಾಲು, ಹಣ್ಣು, ತರಕಾರಿ, ಪತ್ರಿಕೆ, ದಿನಬಳಕೆಯ ವಸ್ತುಗಳ ಸಹಿತ ಆಹಾರ ಸಾಮಗ್ರಿಗಳು ಲಭ್ಯವಾಗಲಿದೆ.

ಸೂಕ್ತ ಕ್ರಮ: ಕೊರೋನ ಸೋಂಕು ಹರಡುವ ಭೀತಿ ಇರುವುದರಿಂದ ದ.ಕ. ಜಿಲ್ಲೆ ಮಾ.31ರವರೆಗೆ ಲಾಕ್‌ಡೌನ್ ಆಗಲಿದೆ. ಜನರು ಮನೆಯಿಂದ ಹೊರಬರದೆ ಸಹಕರಿಸಬೇಕು. ಅಕ್ಕಿ, ಹಾಲು ಸಹಿತ ಅಗತ್ಯ ವಸ್ತುಗಳಿಗಾಗಿ ಮಾತ್ರ ಹೊರಗೆ ಬರಬಹುದು. ಅನಗತ್ಯವಾಗಿ ತಿರುಗಾಡಿದರೆ, ನಿರ್ಲಕ್ಷ್ಯ ವಹಿಸಿದರೆ ಪೊಲೀಸ್ ಬಲವನ್ನು ಉಪಯೋಗಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಿಂದೂ ರೂಪೇಶ್ ಎಚ್ಚರಿಸಿದ್ದಾರೆ.

ಏನೇನು ನಿರ್ಬಂಧ?
- ದ.ಕ. ಜಿಲ್ಲೆಯಿಂದ ಇತರ ಜಿಲ್ಲೆ, ರಾಜ್ಯಗಳಿಗೆ ತೆರಳಲು ಬಸ್ ವ್ಯವಸ್ಥೆ ಇಲ್ಲ.
- ಸರಕಾರಿ-ಖಾಸಗಿ ಕಾರ್ಯಕ್ರಮಗಳು ಸ್ಥಗಿತ
- ಜನರು ಗುಂಪು ಸೇರುವಂತಿಲ್ಲ.
- ಬಾರ್, ರೆಸ್ಟೋರೆಂಟ್ ಬಂದ್
- ಸರಕು ಸಾಗಾಟಕ್ಕೆ ಅನುಮತಿ ಇಲ್ಲ.
- ಗೂಡ್ಸ್ ವಾಹನಗಳು, ಮಾಲ್, ಚಿತ್ರಮಂದಿರಗಳು ಬಂದ್

ಏನೇನು ಇವೆ?
- ಆಸ್ಪತ್ರೆ ಸೇವೆ
- ಮೆಡಿಕಲ್ ಶಾಪ್
- ಆ್ಯಂಬ್ಯುಲೆನ್ಸ್ ಸೇವೆ
- ನಿತ್ಯ ಜೀವನದ ಅಗತ್ಯ ವಸ್ತುಗಳು
- ನೀರು ಸರಬರಾಜು

ನಿರ್ಬಂಧಗಳು
- ತುರ್ತು ಸಂದರ್ಭ ಹೊರತುಪಡಿಸಿ ಮನೆಯಿಂದ ಹೊರಗೆ ಹೋಗಬಾರದು.
- ಸಭೆ ಸಮಾರಂಭಗಳು, ಜಾತ್ರೆ-ಉತ್ಸವ ಆಚರಿಸಬಾರದು.
- ಅಂಗಡಿ, ವಾಣಿಜ್ಯ ಸಂಕೀರ್ಣ, ವರ್ಕ್‌ಶಾಪ್, ಗೋದಾಮುಗಳನ್ನು ಮುಚ್ಚಬೇಕು.
- ಕೈಗಾರಿಕೆ-ಕಾರ್ಖಾನೆಗಳಲ್ಲಿ ಶೇ.50ರ ಅನುಪಾತದ ರೊಟೇಶನ್ ಆಧಾರದಲ್ಲಿ ಕೆಲಸ ನಿರ್ವಹಿಸಬೇಕು.
- ಮಾಹಿತಿ ತ್ತು ಜೈವಿಕ ತಂತ್ರಜ್ಞಾನ ಘಟಕಗಳ ಪೈಕಿ ತುರ್ತು ಹೊರತು ಇತರ ಸೇವೆಗಳನ್ನು ಮನೆಯಿಂದಲೇ ನೀಡಬೇಕು.
- ಬೀಚ್-ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ.
- ಕ್ರೀಡಾಕೂಟ, ಶಿಬಿರ, ಉಪನ್ಯಾಸ, ಕಮ್ಮಟ, ವಸ್ತುಪ್ರದರ್ಶ, ಸಂಗೀತ ಕಾರ್ಯಕ್ರಮ, ಬೇಸಿಗೆ ಶಿಬಿರ ಇತ್ಯಾದಿ ಎಲ್ಲವನ್ನೂ ನಿಷೇಧಿಸಲಾಗಿದೆ.

ವಿನಾಯಿತಿಗಳು
- ಪಡಿತರ ಅಂಗಡಿ, ಮೀನು ಮಾರುಕಟ್ಟೆ, ತರಕಾರಿ, ಹಣ್ಣು ಹಂಪಲು ಅಂಗಡಿಗಳು
- ಅಂಚೆ, ಪೊಲೀಸ್, ಅಗ್ನಿಶಾಮಕ ದಳದ ಸೇವೆಗಳು
- ಸರಕಾರಿ ಕಚೇರಿಗಳು
- ಬ್ಯಾಂಕ್, ಎಟಿಎಂ, ದೂರವಾಣಿ, ಇಂಟರ್‌ನೆಟ್ ಸೇವೆಗಳು
- ಎಲ್ಲಾ ಸರಕು ಸಾಗಾಣಿಕೆ ವಾಹನಗಳು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News