ದ.ಕ. ಜಿಲ್ಲೆಯಲ್ಲಿ 104 ಶಂಕಿತ ಕೊರೋನ ಪ್ರಕರಣಗಳಲ್ಲಿ ಒಂದು ಖಚಿತ: ಕೋಟ ಶ್ರೀನಿವಾಸ ಪೂಜಾರಿ

Update: 2020-03-22 15:43 GMT

ಮಂಗಳೂರು,ಮಾ.22: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 104 ಶಂಕಿತ ಕೊರೋನಾ ಸೋಂಕು ಜ್ವರದ ಪ್ರಕರಣಗಳ ಬಗ್ಗೆ ಹಾಸನದ ಲ್ಯಾಬ್‌ಗೆ ಗಂಟಲಿನ ದ್ರವ್ಯವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು ಈ ಪೈಕಿ ವಿದೇಶದಿಂದ ವಿಮಾನ ಮೂಲಕ ಆಗಮಿಸಿದ ಒಬ್ಬ ವ್ಯಕ್ತಿಗೆ ಕೊರೋನಾ ಸೋಂಕಿನ ಲಕ್ಷಣಗಳಿರುವುದು ಖಚಿತಗೊಂಡಿದೆ.ಈ ಹಿನ್ನೆಲೆಯಲ್ಲಿ ಆ ವಿಮಾನದಲ್ಲಿ ಆಗಮಿಸಿದ್ದ ಎಲ್ಲಾ 165 ಪ್ರಯಾಣಿಕರ ಬಗ್ಗೆ ನಿರ್ದಿಷ್ಟ ದಿನಗಳ ವರಗೆ ನಿಗಾ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪುಜಾರಿ ಸುದ್ದಿಗಾರರಿಗೆ ಇಂದು ತಿಳಿಸಿದ್ದಾರೆ.

ದುಬೈಯಿಂದ ಆಗಮಿಸಿದ್ದ ಈ ವಿಮಾನದಲ್ಲಿ ಮಾರ್ಚ್ 19ರಂದು ಆಗಮಿಸಿದ್ದ ಭಟ್ಕಳದ 22 ವರ್ಷದ ಯುವಕನಲ್ಲಿ ಕೊರೋನಾ ವೈರಸ್ ಜ್ವರ ಲಕ್ಷಣಗಳು ಕಂಡು ಬಂದಿದ್ದರೂ ಆ ವ್ಯಕ್ತಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಜಿಲ್ಲೆಯ ಜನತೆ ಆತಂಕ ಪಡಬೇಕಾಗಿಲ್ಲ, ಎಚ್ಚರಿಕೆ ವಹಿಸಬೇಕಾಗಿದೆ. ಉಳಿದ ಸಹ ಪ್ರಯಾಣಿಕರು ಹಾಗೂ ವಿದೇಶಗಳಿಂದ ಆಗಮಿಸುವ ಪ್ರಯಾಣಿಕರ ಬಗ್ಗೆ ಅವರ ನಿವಾಸಗಳಲ್ಲಿ ನಿಗಾ ವಹಿಸಲು ಸೂಚನೆ ನೀಡಲಾಗಿದೆ. ಈ ಸೂಚನೆಯನ್ನು ಎಲ್ಲರೂ ಪಾಲಿಸಬೇಕೆಂದು ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಜನತಾ ಕರ್ಫ್ಯೂಗೆ ಜನರು ಉತ್ತಮ ಬೆಂಬಲ ನೀಡಿದ್ದಾರೆ. ಜಿಲ್ಲೆಯ ಜನತೆಗೆ ಕೃತಜ್ಞತೆ ಸಲ್ಲಿಸುವುದಾಗಿ ಕೋಟ ಶ್ರೀನಿವಾಸ ಪುಜಾರಿ ತಿಳಿಸಿದ್ದಾರೆ.

ಮಾರ್ಚ್ 31ರವರೆಗೆ ಲಾಕ್ ಡೌನ್ (ಸಂಪೂರ್ಣ ಬಂದ್) ಮುಂದುವರಿಯಲಿದೆ. ತುರ್ತು ಸೇವೆಗಳ ಹೊರತಾಗಿ ಉಳಿದೆಲ್ಲಾ ವ್ಯವಹಾರಗಳಿಗೆ ನಿಯಂತ್ರಣ ಹೇರಲಾಗುವುದು. ಈ ಸಂದರ್ಭದಲ್ಲಿ ಜನರು ಸ್ವಯಂ ಪ್ರೇರಿತರಾಗಿ ನಿಯಮಗಳನ್ನು ಪಾಲನೆ ಮಾಡಬೇಕು. ಜನ ಸೇರುವ ಎಲ್ಲಾ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತದಿಂದ ನಿಯಂತ್ರಣ ಹೇರಲಾಗುವುದು ಎಂದು ಶ್ರೀನಿವಾಸ ಪುಜಾರಿ ತಿಳಿಸಿದ್ದಾರೆ.

ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಆಗಮಿಸಿದ ಪ್ರಯಾಣಿಕರ ಬಗ್ಗೆ ನಿಗಾ ವಹಿಸಲಾಗಿದೆ. ಆದರೆ ಕೆಲವರು ಆ ನಿಯಮಗಳನ್ನು ಪಾಲಿಸದೆ ತಿರುಗಾಡುತ್ತಿದ್ದಾರೆ ಎನ್ನುವ ಮಾಹಿತಿ ಬರುತ್ತಿದೆ. ಅಂತಹವರ ವಿರುದ್ಧ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News