×
Ad

ಕೊರೋನ ವೈರಸ್: ಉಡುಪಿ ಜಿಲ್ಲೆಯಲ್ಲಿ ಒಂದೇ ದಿನ 16 ಶಂಕಿತರು ಆಸ್ಪತ್ರೆಗೆ ದಾಖಲು

Update: 2020-03-22 21:20 IST
ಸಾಂದರ್ಭಿಕ ಚಿತ್ರ

ಉಡುಪಿ, ಮಾ.22: ಕೊರೋನ ವೈರಸ್ ನಿಯಂತ್ರಣಕ್ಕಾಗಿ ಪ್ರಧಾನಿ ಕರೆ ನೀಡಿರುವ ಜನತಾ ಕರ್ಫ್ಯೂವಿನ ಮಧ್ಯೆಯೇ ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 16 ಮಂದಿ ಶಂಕಿತರು ಕೊರೋನ ಸೋಂಕಿನ ಪರೀಕ್ಷೆಗಾಗಿ ಉಡುಪಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

ತೀವ್ರ ಶ್ವಾಸಕೋಶದ ತೊಂದರೆ ಇರುವ ಉಡುಪಿ ಜಿಲ್ಲೆಯ 21ರ ಹರೆಯದ ಯುವಕ, 62ವರ್ಷ ವಯಸ್ಸಿನ ಮಹಿಳೆ, 74 ವರ್ಷ ವಯಸ್ಸಿನ ಹಿರಿಯ ನಾಗರಿಕ, 31ರ ಹರೆಯದ ಯುವಕ, 75 ವರ್ಷ ವಯಸ್ಸಿನ ಮಹಿಳೆ, 41 ವರ್ಷ ವಯಸ್ಸಿನ ಪುರುಷ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅದೇ ರೀತಿ ಶಂಕಿತ ಕೊರೋನ ವೈರಸ್ ಪರೀಕ್ಷೆಗಾಗಿ ಜಪಾನಿನಿಂದ ಆಗಮಿಸಿದ 35ವರ್ಷದ ಪುರುಷ, ಸೌದಿಯಿಂದ ಆಗಮಿಸಿದ ಮಹಿಳೆಯನ್ನು ಸಂಪರ್ಕಿಸಿದ 24ರ ಹರೆಯದ ಯುವಕ, ಸೌದಿ ಅರೇಬಿಯಾದಿಂದ ಆಗಮಿಸಿದ 58ವರ್ಷ ವಯಸ್ಸಿನ ಮಹಿಳೆ, ಸಿಂಗಾಪುರದಿಂದ ಆಗಮಿಸಿದ ವ್ಯಕ್ತಿಯನ್ನು ಸಂಪರ್ಕಿಸಿದ 25ವರ್ಷ ವಯಸ್ಸಿನ ಯುವತಿ, ಮಸ್ಕತ್‌ನಿಂದ ಆಗಮಿಸಿದ 39 ವರ್ಷ ವಯಸ್ಸಿನ ಪುರುಷ, ಅಬುದಾಬಿಯಿಂದ ಆಗಮಿಸಿದ 29ರ ಹರೆಯದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅದೇ ರೀತಿ ಮುಂಬೈಯಿಂದ ಆಗಮಿಸಿದ 50ವರ್ಷದ ಮಹಿಳೆ, 1.6ವರ್ಷ ವಯಸ್ಸಿನ ಗಂಡು ಮಗು, 38ವರ್ಷ ವಯಸ್ಸಿನ ಪುರುಷ ಮತ್ತು ತೆಲಂಗಾಣದಿಂದ ಆಗಮಿಸಿದ 51 ವರ್ಷ ವಯಸ್ಸಿನ ವ್ಯಕ್ತಿಯನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಕಾರ್ಕಳ ಆಸ್ಪತ್ರೆಯಲ್ಲಿ ಮೂವರು, ಕುಂದಾಪುರ ಆಸ್ಪತ್ರೆಯಲ್ಲಿ ಇಬ್ಬರು ಹಾಗೂ ಉಡುಪಿ ಆಸ್ಪತ್ರೆಯಲ್ಲಿ 11 ಮಂದಿ ದಾಖಲಾಗಿದ್ದು, ಇವರಲ್ಲಿ 15 ಮಂದಿ ಉಡುಪಿ ಜಿಲ್ಲೆಯವರಾಗಿದ್ದರೆ, ಒಬ್ಬರು ಹೊರಗಿನವರಾಗಿದ್ದಾರೆ.

ಇವರೆಲ್ಲರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಮಾ.23 ರಂದು ಹಾಸನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಈ ಹಿಂದೆ ಕಳುಹಿಸಲಾಗಿರುವ 10 ಮಂದಿಯ ವರದಿ ಇನ್ನೂ ಬಂದಿಲ್ಲ. ನೆಗೆಟಿವ್ ವರದಿ ಬಂದಿರುವ ಇಬ್ಬರು ಸೇರಿದಂತೆ ಪ್ರಸ್ತುತ ಒಟ್ಟು 28 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಇಂದು 61 ಮಂದಿ ಸೇರಿದಂತೆ ಈವರೆಗೆ ಒಟ್ಟು 448 ಮಂದಿ ಕೊರೋನೊ ವೈರಸ್ ತಪಾಸಣೆಗೊಳಗಾಗಿದ್ದು, ಇವರಲ್ಲಿ 26 ಮಂದಿ 28 ದಿನಗಳ ತ್ರೀವ ನಿಗಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಇಂದು 22 ಮಂದಿ ಸೇರಿದಂತೆ ಒಟ್ಟು 320ಮಂದಿ ಗೃಹ ನಿಗಾದಲ್ಲಿದ್ದಾರೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News