ಜನತಾ ಕರ್ಫ್ಯೂಗೆ ಉಡುಪಿ ಜಿಲ್ಲೆ ಸಂಪೂರ್ಣ ಸ್ತಬ್ಧ
ಉಡುಪಿ, ಮಾ.22: ಉಡುಪಿ ಜಿಲ್ಲೆಯಾದ್ಯಂತ ಇಂದು ಜನರು ಸ್ವಯಂ ಪ್ರೇರಿತರಾಗಿ ಮನೆಯಿಂದ ಹೊರಗಡೆ ಬಾರದೆ ಹಾಗೂ ಅಂಗಡಿ ಮುಗ್ಗಟ್ಟು ಗಳನ್ನು ಸಂಪೂರ್ಣ ಬಂದ್ ಮಾಡುವ ಮೂಲಕ ಕೊರೋನಾ ವೈರಸ್ ವಿರುದ್ಧದ ಜನತಾ ಕರ್ಫ್ಯೂ ಕರೆಗೆ ಬೆಂಬಲ ವ್ಯಕ್ತಪಡಿಸಿದೆ.
ಉಡುಪಿ ನಗರ, ಕುಂದಾಪುರ, ಬೈಂದೂರು, ಗಂಗೊಳ್ಳಿ, ಕಾರ್ಕಳ, ಕಾಪು, ಬ್ರಹ್ಮಾವರ, ಕೋಟ, ಕಟಪಾಡಿ ಸೇರಿದಂತೆ ಇಡೀ ಜಿಲ್ಲೆಯ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳು ಬೆಳಗ್ಗೆಯಿಂದ ರಾತ್ರಿಯವರೆಗೂ ಸಂಪೂರ್ಣ ಸ್ತಬ್ಧ ಗೊಂಡಿದ್ದವು. ಕೆಎಸ್‌ಆರ್‌ಟಿಸಿ, ಖಾಸಗಿ ಸರ್ವಿಸ್ ಹಾಗೂ ಸಿಟಿ ಬಸ್‌ಗಳು ತಮ್ಮ ಸಂಚಾರವನ್ನು ಸ್ಥಗಿತ ಗೊಳಿಸಿದ್ದವು. ಅದೇ ರೀತಿ ಟೆಂಪೊ, ಕಾರು, ಆಟೋ ರಿಕ್ಷಾಗಳು ರಸ್ತೆಗೆ ಇಳಿಯದೆ ಕರ್ಫ್ಯೂಗೆ ಬೆಂಬಲ ಸೂಚಿಸಿದವು.
ಉಡುಪಿ ನಗರದ ರಸ್ತೆಗಳು ಜನ ಹಾಗೂ ವಾಹನ ಸಂಚಾರ ಇಲ್ಲದೆ ಬಿಕೋ ಎನ್ನುತ್ತಿದ್ದವು. ಆಸ್ಪತ್ರೆಗಳು, ಮೆಡಿಕಲ್, ಮಿಲ್ಕ್ ಪಾರ್ಲರ್‌ಗಳು ಮತ್ತು ಕೆಲ ವೊಂದು ಪೆಟ್ರೋಲ್ ಬಂಕ್‌ಗಳು ತೆರಿದ್ದವು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೆಲವೊಂದು ಅಗತ್ಯ ವಸ್ತುಗಳ ಸಾಗಾಟ ಮಾಡುವ ಲಾರಿಗಳ ಸಂಚಾರ ಹಾಗೂ ಬೆರಣಿಕೆಯ ಕಾರು, ದ್ವಿಚಕ್ರ ವಾಹನಗಳ ಸಂಚಾರ ಕಂಡುಬಂದವು.
ಕುತೂಹಲಕ್ಕಾಗಿ ಬೆರಣಿಕೆಯ ಜನರು ದ್ವಿಚಕ್ರ ವಾಹನ ಹಾಗೂ ಕಾರುಗಳಲ್ಲಿ ಉಡುಪಿ ನಗರಕ್ಕೆ ಆಗಮಿಸಿ ವಿಡಿಯೋ ಚಿತ್ರೀಕರಣ ನಡೆಸುತ್ತಿರುವುದು ಕಂಡು ಬಂತು. ನಿತ್ಯ ಜನದಟ್ಟಣೆಯ ತಾಣವಾಗಿದ್ದ ಸರ್ವಿಸ್, ಸಿಟಿ ಬಸ್, ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣಗಳು ಖಾಲಿ ಖಾಲಿಯಾಗಿದ್ದವು. ಮೀನು ಮಾರುಕಟ್ಟೆ, ಹೂವಿನ ಮಾರುಕಟ್ಟೆ, ಮಾಂಸದ ಅಂಗಡಿ ಎಲ್ಲೂ ವ್ಯವಹರಿಸುತ್ತಿರಲಿಲ್ಲ. ನಗರಸಭೆ, ಪುರಸಭೆ ಪೌರ ಕಾರ್ಮಿಕರು, ಮೆಸ್ಕಾಂ ಸಿಬ್ಬಂದಿ ಎಂದಿನಂತೆ ಕರ್ತವ್ಯ ನಿರ್ವಹಿಸಿದರು.
ಜಿಲ್ಲೆಯ ಮೀನುಗಾರಿಕಾ ಬಂದರುಗಳು ಸಂಪೂರ್ಣ ಸ್ತಬ್ಧಗೊಂಡಿದ್ದವು. ರವಿವಾರವಾದರೂ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಕಾಪು, ಮಲ್ಪೆ, ತ್ರಾಸಿ ಮರವಂತೆ ಬೀಚ್‌ಗಳಲ್ಲಿ ಪ್ರವಾಸಿಗರೇ ಇರಲಿಲ್ಲ. ಉಡುಪಿ ಜಿಲ್ಲಾಸ್ಪತ್ರೆ ತೆರೆದ್ದಿದ್ದರೂ ತುರ್ತು ಚಿಕಿತ್ಸೆಗಾಗಿ ಮಾತ್ರ ಜನ ಆಗಮಿಸುತ್ತಿದ್ದರು. ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಿಸಲಾದ ಕೊರೋನ ಕುರಿತ ಮಾಹಿತಿ ಕೇಂದ್ರಗಳಿಗೆ ಸಾರ್ವ ಜನಿಕರು ಆಗಮಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದರು.
ಬೆಳಗ್ಗೆಯಿಂದ ಸಂಜೆಯವರೆಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭಕ್ತರು ಯಾರು ಆಗಮಿಸುತ್ತಿರಲಿಲ್ಲ. ಅದೇ ರೀತಿ ಕೆಲವು ಮಸೀದಿಗಳಲ್ಲಿ ನಮಾಝ್ ಹಾಗೂ ಚರ್ಚ್‌ಗಳಲ್ಲಿ ರವಿವಾರದ ವಿಶೇಷ ಪ್ರಾರ್ಥನೆಯನ್ನು ಸ್ಥಗಿತಗೊಳಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿ, ಉಡುಪಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಆಯಾ ಠಾಣಾ ವ್ಯಾಪ್ತಿಯ ಪೊಲೀಸರು ಗಸ್ತು ತಿರುಗುತ್ತ ಕರ್ಫ್ಯೂ ಬಗ್ಗೆ ಪರಿಶೀಲನೆ ನಡೆಸಿದರು.
ಪ್ರತಿದಿನ ಮನೆಗೆ ಅಹವಾಲು ಇಟ್ಟುಕೊಂಡು ನೂರಾರು ಸಂಖ್ಯೆಯಲ್ಲಿ ಬರುತ್ತಿದ್ದ ಸಾರ್ವಜನಿಕರು, ಇಂದು ಒಬ್ಬರೂ ನನ್ನನ್ನು ಭೇಟಿಯಾಗಲು ಬಂದಿಲ್ಲ. ಹೀಗೆ ಜನತಾ ಕರ್ಫ್ಯೂಗೆ ಜನರೆ ಪೂರ್ಣ ಬೆಂಬಲ ನೀಡಿದ್ದಾರೆ. ಇದನ್ನು ಮಾ.31ರವರೆಗೆ ಮುಂದುವರೆಸುವಂತೆ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆ. ಹೀಗೆ ಮಾಡುವುದರಿಂದ ಮುಂದಿನ 10 ದಿನಗಳಲ್ಲಿ ದೇಶ ಸಹಜ ಸ್ಥಿತಿಗೆ ಬರುವ ಸಾಧ್ಯತೆ ಇದೆ.
-ರಘುಪತಿ ಭಟ್, ಶಾಸಕರು, ಉಡುಪಿ.
ಸರಕಾರದ ಆದೇಶ ಹಾಗೂ ಬಿಷಪ್ ಸೂಚನೆಯಂತೆ ಚರ್ಚಿನಲ್ಲಿ ಕರೋನಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಚರ್ಚ್ ಬಾಗಿಲು ತೆಗೆದಿದ್ದರೂ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಲಿಲ್ಲ. ಚರ್ಚಿನ ಬದಲು ಮನೆಯಲ್ಲಿ ಬೈಬಲ್ ಪಠಣ, ಪ್ರಾರ್ಥನೆ ಸಲ್ಲಿಸುವ ಜೊತೆ ಕ್ರೈಸ್ತ ಸಮಾಜದ ಎಲ್ಲರೂ ಕರೋನಾ ನಿವಾರಣೆಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
- ಫಾ.ಸ್ಟ್ಯಾನಿ ತಾವ್ರೋ, ಪ್ರಧಾನ ಧರ್ಮಗುರು, ಕುಂದಾಪುರ ವಲಯ