ದಲಿತರ ನಿವೇಶನಕ್ಕೆ ಕಮರ್ಶಿಯಲ್ ಭೂಪರಿವರ್ತನೆಗೆ ದಸಂಸ ಆಗ್ರಹ
ಉಡುಪಿ, ಮಾ.22: ವಾಸ್ತವ್ಯಕ್ಕೆ ಬಳಸಿ ಉಳಿಕೆಯಾಗಿರುವ ದಲಿತರ ಭೂಮಿ ಯನ್ನು ಸ್ವಯಂ ಆರ್ಥಿಕ ಅಭಿವೃದ್ಧಿಗಾಗಿ ಕಮರ್ಶಿಯಲ್ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಸಮಿತಿ ಮಾ.21ರಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.
ಪರಿಶಿಷ್ಟ ಜಾತಿಯವರಿಗೆ ಸರಕಾರ ನೀಡಿರುವ ದರ್ಕಾಸು ನಿವೇಶನಗಳನ್ನು ಭೂಪರಭಾರೆ ನಿಷೇಧ ಕಾಯಿದೆಯಡಿ ಅಭಿವೃದ್ಧಿ ಪಡಿಸಲು ಸಾಧ್ಯವಾಗುತ್ತಿಲ್ಲ. ಸರಕಾರಿ ಸ್ವೌಮ್ಯದ ಸಂಸ್ಥೆಗಳನ್ನು ಖಾಸಗೀಕರಣದ ಪರಿಣಾಮ ದಲಿತ ವಿದ್ಯಾವಂತರು ನೇಮಕಾತಿ ಇಲ್ಲದೆ ಸರಕಾರಿ ಕೆಲಸದಿಂದ ವಂಚಿತರಾಗುತ್ತಿದ್ದಾರೆ. ದಲಿತರ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ಹಣ ಮೀಸಲಿಟ್ಟರೂ ಅದು ದಲಿತರೇತರಿಗೆ ಬಳಕೆಯಾಗುತ್ತಿದೆ. ಎಸ್‌ಸಿಪಿ, ಟಿಎಸ್‌ಪಿ ಹಣ ದುರ್ಬಳಕೆಯಾಗುತ್ತಿದೆ. ಸೂಕ್ತ ಅನುದಾನ ಇಲ್ಲದೆ ಅಂಬೇಡ್ಕರ್ ನಿಗಮ ಜೀವಕಳೆ ಕಳೆದುಕೊಂಡಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ದಲಿತರಿಗೆ ನೀಡಿದ ಭೂಪರಭಾರೆ ನಿಯಮ ಸಡಿಲಿಕೆಯಾಗಬೇಕು. ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿಯವರ ಮೀಸಲಾತಿ ಶೇ.20ಕ್ಕೆ ಹೆಚ್ಚಿಸಬೇಕು. ಅಲ್ಲದೆ ಜನಗಣತಿಯಲ್ಲಿ ಎನ್‌ಪಿಆರ್ ರದ್ದುಗೊಳಿಸಬೇಕು ಎಂದು ದಸಂಸ ಮನವಿಯಲ್ಲಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್, ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮ್‌ರಾಜ್ ಬಿರ್ತಿ, ಮಂಜುನಾಥ್ ಬಾಳ್ಕುದ್ರು, ಭಾಸ್ಕರ್ ಮಾಸ್ತರ್, ಶ್ರೀಧರ್ ಕುಂಜಿಬೆಟ್ಟು, ಎಸ್‌ಸಿ ಎಸ್ಟಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ಮಣೂರು, ಉಪಾಧ್ಯಕ್ಷ ಫಕೀರಪ್ಪ, ದಲಿತ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಸಂಚಾಲಕ ಎಸ್.ಎಸ್.ಪ್ರಸಾದ್, ಜಿಲ್ಲಾ ದಲಿತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ರಾಜೇಂದ್ರ ಮಾಸ್ಟರ್ ಮೂಡುಬೆಳ್ಳೆ, ದಸಂಸ ಸಂಚಾಲಕ ರಾಘವ ಕುಂಜಿಬೆಟ್ಟು, ದಲಿತ ಮುಖಂಡ ಶ್ರೀಪತಿ, ವಿಠಲ್ ತೊಟ್ಟಂ ಉಪಸ್ಥಿತರಿದ್ದರು.