ಎನ್‌ಪಿಆರ್-ಎನ್‌ಆರ್‌ಸಿ ವಿರುದ್ಧದ ಹೋರಾಟ ಮುಂದೂಡಿಕೆ

Update: 2020-03-22 18:26 GMT

ಮಂಗಳೂರು, ಮಾ.22: ಕೊರೋನ ಸೋಂಕಿನ ಭೀತಿ ಹೆಚ್ಚುತ್ತಿದ್ದು, ಈ ಸೋಂಕು ಹಬ್ಬದ ಹಾಗೆ ತಡೆಯುವುದು ಎಲ್ಲರ ಕರ್ತವ್ಯವಾಗಿದೆ. ಈ ಹಿನ್ನಲೆಯಲ್ಲಿ ಎನ್‌ಪಿಆರ್-ಎನ್‌ಆರ್‌ಸಿ ವಿರುದ್ಧದ ಹೋರಾಟದ ಭಾಗವಾಗಿ ನಡೆಯುತ್ತಿದ್ದ ಎಲ್ಲಾ ಬೃಹತ್ ಕಾರ್ಯಕ್ರಮಗಳನ್ನು ಮುಂದಕ್ಕೆ ಹಾಕಲು ‘ನಾವು ಭಾರತೀಯರು, ಜಂಟಿ ಕ್ರಿಯಾ ಸಮಿತಿ ಹಾಗೂ ಸಂವಿಧಾನ ರಕ್ಷಣಾ ಸಮಿತಿಗಳ ಕರ್ನಾಟಕ ರಾಜ್ಯ ಒಕ್ಕೂಟವು ನಿರ್ಧರಿಸಿದೆ.

ಭಗತ್ ಸಿಂಗ್ ಮತ್ತು ಸಂಗಾತಿಗಳ ಹುತಾತ್ಮತೆಯ ಸ್ಮರಣ ದಿನವಾದ ಮಾ.23ರಂದು ಹಮ್ಮಿಕೊಂಡಿದ್ದ ಮನೆಗಣತಿ ಮುಂದೂಡಿ, ಎನ್‌ಪಿಆರ್ ರದ್ದುಗೊಳಿಸಿ ರಾಜ್ಯವ್ಯಾಪಿ ಜನಾಂದೋಲನಕ್ಕೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಚಾಲನೆ ನೀಡುವ ಕಾರ್ಯಕ್ರಮ ಹಾಗೂ ಮಾ.29ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಸಮಾವೇಶವನ್ನೂ ಮುಂದೂಡಲಾಗಿದೆ.

ಮುಂದಿನ ದಿನಗಳ ಪರಿಸ್ಥಿತಿಯನ್ನು ಅವಲೋಕಿಸಿ ಪ್ರತಿಭಟನೆಗಳ ದಿನಾಂಕ ಮತ್ತು ಸ್ವರೂಪದ ಬಗ್ಗೆ ಒಕ್ಕೂಟವು ತೀರ್ಮಾನ ಕೈಗೊಳ್ಳಲಿದೆ.ಯಾವುದೇ ಪ್ರಾಮಾಣಿಕ ಜನಪರ ಕಾಳಜಿಯಿಲ್ಲದ, ದೇಶಕ್ಕೆ ಆರ್ಥಿಕ ಹೊರೆಯಾಗಲಿರುವ, ಸಂಶಯಾಸ್ಪದವಾದ ಎನ್‌ಪಿಆರ್‌ನ್ನು ಸರಕಾರ ಹಿಂತೆಗೆದುಕೊಳ್ಳಲೇಬೇಕು. ದೇಶದ ಜನರ ಪೌರತ್ವವೇ ಇಲ್ಲದಂತಾಗುವುದು ಒಂದು ರೀತಿಯ ನಾಗರಿಕ ಸಾವಾಗಿದೆ. ಹಾಗಾಗಿ ಜನರು ಮತ್ತೆ ಬೀದಿಯ ಮೇಲೆ ಬರುವಂತಹ ಸಂದರ್ಭವನ್ನು ಸರಕಾರವು ನಿರ್ಮಿಸಬಾರದು. ಈ ವಾತಾವರಣದಲ್ಲಿ ಮನೆ ಮನೆಗೆ ತೆರಳುವ ಸರಕಾರಿ ನೌಕರರಿಗೆ ವೈರಾಣು ಸೋಂಕು ತಗುಲಿ ಜೀವ ಹಾನಿಯಾಗುವ ಸಾಧ್ಯತೆಯಿದೆ. ಹಾಗಾಗಿ ಮನೆಗಣತಿಯನ್ನೂ ಸರಕಾರವು ಮುಂದೂಡಬೇಕು ಎಂದು ಒಕ್ಕೂಟದ ಜಿಲ್ಲಾ ಸಂಚಾಲಕ ಉಮರ್ ಯು.ಎಚ್. ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News