×
Ad

ಕೊರೋನ ಭೀತಿ: ಗಾರ್ಮೆಂಟ್ಸ್, ಗೇರುಬೀಜ ಕಾಖಾನೆ ಕ್ಲೋಸ್

Update: 2020-03-23 21:02 IST

ಉಡುಪಿ, ಮಾ.23: ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಕಾಯಿಲೆ ಸ್ಫೋಟ ಹಾಗೂ ಹರಡುವುದನ್ನು ತಡೆಗಟ್ಟಲು ಸಾರ್ವಜನಿಕರು ವಿಶೇಷ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಕೆಲವು ಚಟುವಟಿಕೆಗಳನ್ನು ನಿರ್ಬಂಧಿಸಿ, ಕಾರ್ಯಾಚರಿಸುತ್ತಿರುವ ಸಂಸ್ಥೆಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ.

ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಕಾರ್ಮಿಕರು ಕೆಲಸ ಮಾಡುವ ಗೇರುಬೀಜ ಹಾಗೂ ಗಾರ್ಮೆಂಟ್ ಕಾರ್ಖಾನೆಗಳನ್ನು ಮುಚ್ಚುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಕೊರೋನ ವೈರಾಣುಗಳು ಹರಡುವುದನ್ನು ತಡೆಗಟ್ಟಲು ಇಂದಿನಿಂದ ಮುಂದಿನ ಆದೇಶದವರೆಗೆ ಜಿಲ್ಲೆಯಲ್ಲಿರುವ ಎಲ್ಲಾ ಗೇರುಬೀಜ ಹಾಗೂ ಗಾರ್ಮೆಂಟ್ ಕಾರ್ಖಾನೆಗಳಲ್ಲದೇ 25ಕ್ಕಿಂತ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಕೆಲಸ ಮಾಡುವ ಎಲ್ಲಾ ಕಾರ್ಖಾನೆ ಗಳನ್ನು ತಕ್ಷಣದಿಂದ ಮುಚ್ಚುವಂತೆ ಇಂದು ಹೊರಡಿಸಿದ ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.

ಸಂತೆ ನಿಲ್ಲಿಸಿದ ಅಧಿಕಾರಿಗಳು: ಕಳೆದೊಂದು ವಾರದಿಂದ ಜಿಲ್ಲೆಯ ಎಲ್ಲಾ ವಾರದ ಸಂತೆಗಳನ್ನು ಮುಂದಿನ ಆದೇಶದವರೆಗೆ ರದ್ದುಪಡಿಸ ಲಾಗಿದೆ ಎಂದು ಜಿಲ್ಲಾಧಿಕಾರಿಗಳ ಘೋಷಣೆ, ಹಲವು ಸಂತೆಗಳನ್ನು ಅಧಿಕಾರಿಗಳು ನಿಲ್ಲಿಸಿದ ವರದಿ ಪತ್ರಿಕೆಗಳಲ್ಲಿ ಪ್ರಕಟವಾದ ಹೊರತಾಗಿಯೂ ಸೋಮವಾರ ನಡೆಯುವ ಬ್ರಹ್ಮಾವರದ ವಾರದ ಸಂತೆಯನ್ನು ತಹಶೀಲ್ದಾರ್ ಕಿರಣ್ ಗೋರಯ್ಯ ನೇತೃತ್ವದಲ್ಲಿ ಅಧಿಕಾರಿಗಳು ನಿಲ್ಲಿಸಬೇಕಾದ ಪ್ರಸಂಗ ಎದುರಾಯಿತು.

ಎಂದಿನಂತೆ ಹೊರಗಿನಿಂದ ಬರುವ ತರಕಾರಿ, ಜಿನಸು ವ್ಯಾಪಾರಿಗಳು ಸಂತೆ ವ್ಯಾಪಾರಕ್ಕಾಗಿ ಬೆಳಗ್ಗೆಯೇ ತಯಾರಿ ನಡೆಸಿದ್ದು, ಜನರೂ ತರಕಾರಿ ಹಾಗೂ ಇತರ ವಸ್ತುಗಳನ್ನು ಖರೀದಿಸಲು ಆಗಮಿಸತೊಡಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ತಹಶೀಲ್ದಾರ್‌ರನ್ನು ತಕ್ಷಣ ಕಂದಾಯ ನಿರೀಕ್ಷಕರು, ಗ್ರಾಮಕರಣಿಕರು ಹಾಗೂ ಗ್ರಾಮ ಸಹಾಯಕರೊಂದಿಗೆ ಬಂದು ಸಂತೆಗೆ ಬಂದಿದ್ದ ಎಲ್ಲಾ ವ್ಯಾಪಾರಸ್ಥರನ್ನು ಅವರವರ ಸಾಮಾನು ಸರಂಜಾಮುಗಳೊಂದಿಗೆ ಬಲಾತ್ಕಾರವಾಗಿ ಅವರ ವಾಹನಗಳಿಗೆ ತುಂಬಿ ಜಾಗವನ್ನು ಖಾಲಿ ಮಾಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News