ಕೊರೋನ ವೈರಸ್ ಬಗ್ಗೆ ಮುನ್ನೆಚ್ಚರಿಕೆ ವಹಿಸಿ: ಡಾ.ಕೀರ್ತಿ ಬಾಲನ್
ಉಡುಪಿ, ಮಾ.23: ಕೊರೋನ ವೈರಾಣು ಕುರಿತಂತೆ ಮುನ್ನೆಚ್ಚರಿಕೆ ವಹಿಸುವುದರ ಜೊತೆಗೆ ಸಾರ್ವಜನಿಕ ವಲಯದಲ್ಲಿ ಸೂಕ್ತ ಜಾಗೃತಿ ಮೂಡಿಸು ವಂತೆ ಡಾ.ಕೀರ್ತಿ ಬಾಲನ್ ತಿಳಿಸಿದ್ದಾರೆ.
ಸೋಮವಾರ ಅಜ್ಜರಕಾಡಿನಲ್ಲಿರುವ ಉಡುಪಿ ರೆಡ್‌ಕ್ರಾಸ್ ಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ಹಾಗೂ ಕಾರ್ಮಿಕ ತರಬೇತಿ ಸಂಸ್ಥೆ ಇವರ ಸಹಭಾಗಿತ್ವದಲ್ಲಿ, ಸ್ವಯಂ ಸೇವಕರಾಗಿ ನೊಂದಾಯಿಸಿರುವ ಕೊರೋನಾ ಸೈನಿಕರಿಗೆ , ಕೊರೋನಾ ಬಗ್ಗೆ ಮಾಹಿತಿ ನೀಡಿ ಅವರು ಮಾತನಾಡಿದರು.
ಕೊರೋನ ಕುರಿತು ಸಾರ್ವಜನಿಕರ ಉದಾಸೀನ ಮನೋಭಾವವನ್ನು ದೂರಗೊಳಿಸಿ, ಈ ರೋಗದ ಗಂಭೀರತೆ ಬಗ್ಗೆ ಅರಿವು ಮೂಡಿಸಬೇಕಿದೆ. ಸಾರ್ವಜನಿಕರು ಮತ್ತು ಸ್ವಯಂ ಸೇವಕರು ಸ್ವಚ್ಚತೆಯ ಕುರಿತಂತೆ ಹೆಚ್ಚಿನ ಗಮನ ಹರಿಸುವಂತೆ ತಿಳಿಸಿದ ಅವರು, ಕೊರೋನ ಕುರಿತು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಮತ್ತು ತಡೆಗಟ್ಟುವಿಕೆ ಬಗ್ಗೆ ಹಾಗೂ ಸುರಕ್ಷಿತವಾಗಿ ಕೈ ತೊಳೆಯುವ ವಿಧಾನದ ಬಗ್ಗೆ ವಿವರಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಡುಪಿ ಶಾಖೆಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಮಾತನಾಡಿ, ಕೊರೋನ ಕುರಿತಂತೆ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳದಿದ್ದಲ್ಲಿ ಅಗುವ ಅನಾಹುತವನ್ನು ಊಹಿಸಲು ಸಾಧ್ಯವಿಲ್ಲ. ರೆಡ್‌ಕ್ರಾಸ್ ವತಿುಂದ ಜಿಲ್ಲೆಯಾದ್ಯಂತ ಅರಿವು ಮೂಡಿಸುವ ಮತ್ತು ನೆರವು ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಬಾಲಕೃಷ್ಣ ಮಾತನಾಡಿ, ಜಿಲ್ಲೆಯ ಅಸಂಘಟಿತ ವಲಯದ ಕಟ್ಟಡ ಕಾರ್ಮಿಕರಿಗೆ ಕೊರೋನ ಕುರಿತು ಜಾಗೃತಿ ಮತ್ತು ಅಗತ್ಯ ಸುರಕ್ಷಾ ವಸ್ತುಗಳಾದ ಮಾಸ್ಕ್‌ಗಳು, ಸ್ಯಾನಿಟೈಸರ್‌ಗಳನ್ನು ಅವರು ವಾಸ ಮಾಡುವ ಸ್ಥಳಗಳಿಗೇ ತೆರಳಿ ವಿತರಿಸಲು ಕಾರ್ಮಿಕ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.