ಫ್ಯಾಕ್ಟ್ ಚೆಕ್: ಕೊರೋನ ನಿಯಂತ್ರಿಸಲು ಎಲ್ಲರೂ ಮಾಸ್ಕ್ ಧರಿಸಿ ತಿರುಗಬೇಕಾದ ಅವಶ್ಯಕತೆಯಿಲ್ಲ

Update: 2020-03-23 15:55 GMT

ಮಂಗಳೂರು, ಮಾ.23: ಕೊರೋನದಷ್ಟೇ ವೇಗವಾಗಿ ಹರಡುತ್ತಿರುವ ವದಂತಿಗಳು ಹಾಗು ತಿರುಚಿದ ಸುದ್ದಿಗಳಿಗೆ ತಡೆಯೇ ಇಲ್ಲದಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಕೊರೋನ ಪೀಡಿತರಿಗೆ ಚಿಕಿತ್ಸೆ ಹಾಗು ಆರೈಕೆ ನೀಡುವ ವೈದ್ಯಕೀಯ ಸಿಬ್ಬಂದಿಯ ಆರೋಗ್ಯ ರಕ್ಷಣೆ ಕುರಿತು ಇತ್ತೀಚಿಗೆ ನೀಡಿದ್ದ ಪ್ರಕಟಣೆಯೊಂದನ್ನು ತಿರುಚಿ "ಕೊರೋನ ವೈರಸ್ ಗಾಳಿಯಲ್ಲಿ ಎಂಟು ಗಂಟೆ ಬದುಕುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪ್ರತಿಯೊಂದು ಕಡೆಯೂ ಮಾಸ್ಕ್ ಹಾಕಿಕೊಂಡೇ ಇರಬೇಕು" ಎಂಬ ಪೋಸ್ಟರ್ ಹಾಗು ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಆದರೆ ಇದು ನಿಜವಲ್ಲ. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯು, "ವೈದ್ಯಕೀಯ ಚಿಕಿತ್ಸಾ ಪ್ರದೇಶದಲ್ಲಿ ನಡೆಯುವ ಚಿಕಿತ್ಸಾ ಪ್ರಕ್ರಿಯೆಗಳ ಸಂದರ್ಭದಲ್ಲಿ ರೋಗಾಣುಗಳು ಗಾಳಿಯಲ್ಲಿ ಸೇರುವ ಹಾಗು ಸ್ವಲ್ಪ ಹೆಚ್ಚು ಸಮಯ ಅಲ್ಲಿ ಉಳಿಯುವ ಸಾಧ್ಯತೆ ಇರುವುದರಿಂದ ಈ ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆಗಾಗಿ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕಾಗಬಹುದು" ಎಂದು ಹೇಳಿತ್ತು. ಆದರೆ "ಸೀನುವುದರಿಂದ ಅಥವಾ ಕೆಮ್ಮುವುದರಿಂದ ಹಾರುವ ಹನಿಗಳು, ದ್ರವ ತುಣುಕುಗಳಿಂದ ವೈರಸ್ ಹರಡುತ್ತದೆ" ಎಂದು ವಿಶ್ವ ಆರೋಗ್ಯ ಸಂಸ್ಥೆಯ 'ಹೊಸ  ಕಾಯಿಲೆಗಳು ಮತ್ತು ಪ್ರಾಣಿಗಳಿಂದ ಮನುಷ್ಯರಿಗೆ ಬರುವ ಕಾಯಿಲೆಗಳ ವಿಭಾಗ'ದ ಮುಖ್ಯಸ್ಥರಾದ ಡಾ. ಮರಿಯಾ ವಾನ್ ಕೆರ್ಕೊವ್ ಅವರು ಹೇಳಿದ್ದರು.

ರೋಗಿಗಳು ಸೀನುವಾಗ ಮತ್ತು ಕೆಮ್ಮುವಾಗ ನೀರಿನ ಹನಿಗಳ ಮೂಲಕ ವೈರಸ್ ಹರಡುವ ಸಾಧ್ಯತೆ ಇರುವುದರಿಂದ ವೈದ್ಯರು, ನರ್ಸ್ ಗಳು ಮಾಸ್ಕ್ ಧರಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆ ನೀಡಿತ್ತು. ಆದರೆ ಇದೀಗ ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆಯನ್ನು ತಿರುಚಿ ಹರಡಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು ರೋಗಿಗಳ ಸಂಪರ್ಕದಲ್ಲಿರುವ ಅಥವಾ ಅವರ ಬಳಿಯಿರುವ ಆರೋಗ್ಯ ಕಾರ್ಯಕರ್ತರಿಗೆ ಸೂಚನೆಗಳನ್ನು ನೀಡಿತ್ತೇ ಹೊರತು ಎಲ್ಲೂ 'ಕೊರೊನಾವೈರಸ್ ಗಾಳಿಯಲ್ಲಿ 8 ಗಂಟೆಗಳ ಕಾಲ ಬದುಕುವುದರಿಂದ ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು' ಎಂದು ಹೇಳಿರಲಿಲ್ಲ.

ವೈದ್ಯರು ಹೇಳುವುದೇನು?

ಕೊರೋನ ವೈರಸ್ ಗಾಳಿಯ ಮೂಲಕ ಹರಡುವುದಿಲ್ಲ: ಡಾ.ರಾಜೇಶ್‌

"ಕೊರೋನ ವೈರಸ್ ಗಾಳಿಯಲ್ಲಿ ದೂರ ಹರಡುವುದಿಲ್ಲ. ಅದು ಕೆಳ ಸ್ಥರಗಳಲ್ಲಿ ಇರುವ ವಸ್ತುಗಳು ಉದಾಹರಣೆಗೆ ಮೇಜು, ಬೆಂಚು ಇತರ ಸಾಮಗ್ರಿಗಳ ಮೂಲಕ ಹಾಗೂ ಕೊರೋನ ಪೀಡಿತ ವ್ಯಕ್ತಿಗಳ ಮೂಲಕ ಮಾತ್ರ ಹರಡುತ್ತದೆ. ಗಾಳಿಯಲ್ಲಿ ಹರಡುವುದಿಲ್ಲ ಅದಕ್ಕಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಹೋಗಬೇಕು ಎನ್ನುವುದು ಸರಿಯಲ್ಲ’’ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ರಾಜೇಶ್ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News