×
Ad

ಹಾಲು, ಪತ್ರಿಕಾ ಏಜೆಂಟ್‍ಗೆ ಹಲ್ಲೆ ಆರೋಪ: ವಿಟ್ಲ ಎಸ್ಸೈ ವಿರುದ್ಧ ಡಿವೈಎಸ್ಪಿಗೆ ದೂರು

Update: 2020-03-23 22:29 IST

ಬಂಟ್ವಾಳ, ಮಾ. 23: ಅಂಗಡಿಯೊಳಗೆ ಏಕಾಏಕಿ ನುಗ್ಗಿರುವ ವಿಟ್ಲ ಪೊಲೀಸ್ ಠಾಣೆಯ ಎಸೈ ವಿನೋದ್ ರೆಡ್ಡಿ ತನಗೆ ಹಾಗೂ ತನ್ನ ಅಂಗಡಿಯ ಕೆಲಸದವನಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸಾಲೆತ್ತೂರು ಹಾಲು ಮತ್ತು ಪತ್ರಿಕಾ ಏಜೆಂಟ್ ಒಬ್ಬರು ಬಂಟ್ವಾಳ ಡಿವೈಎಸ್ಪಿಗೆ ದೂರು ನೀಡಿದ್ದಾರೆ.

ಸಾಲೆತ್ತೂರಿನ ನಾಬ್ ಮಿಲ್ಕ್ ಪಾರ್ಲರ್ ಮಾಲಕ ಶಿಖಂದರ್ ಬಾತಿಶ್ ಎಂಬವರು ದೂರು ನೀಡಿದ್ದು, ಸೋಮವಾರ ಮಧ್ಯಾಹ್ನ 12 ಗಂಟೆಯ ವೇಳೆಗೆ ಕಾನ್‍ಸ್ಟೇಬಲ್ ಜೊತೆ ಆಗಮಿಸಿದ ವಿಟ್ಲ ಠಾಣಾ ಎಸ್ಸೈ ವಿನೋದ್ ರೆಡ್ಡಿ ಏಕಾಏಕಿ ಅಂಗಡಿಯೊಳಗೆ ನುಗ್ಗಿ ಕೆಲಸದವ ನವಾಝ್‍ನನ್ನು ಅಂಗಡಿಯಿಂದ ಹೊರೆಗೆ ಎಳೆದು ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ನಾನು ಮಧ್ಯೆ ಪ್ರವೇಶಿಸಿ, ಆತ ಅಂಗಡಿಯ ಕೆಲಸದವ, ಆತನಿಗೆ ಹಲ್ಲೆ ಮಾಡದಂತೆ ವಿನಂತಿಸಿದಾಗ ನನ್ನ ಅಂಗಿಯ ಕಾಲರ್ ಪಟ್ಟಿ ಹಿಡಿದು ಕಿವಿಯ ಭಾಗಕ್ಕೆ ಹಲ್ಲೆ ನಡೆಸಿದ್ದಾರೆ. ಇದರಿಂದ ನನಗೆ ಗಾಯವಾಗಿದೆ ಎಂದು ಡಿವೈಎಸ್ಪಿಗೆ ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ.

ನನ್ನ ತಮ್ಮ ಇರ್ಫಾನ್ ಹೆಸರಿನಲ್ಲಿ ಸ್ಥಳೀಯ ಗ್ರಾಮ ಪಂಚಾಯತ್‍ನಿಂದ ಪರವಾನಿಗೆ ಪಡೆದು ಸಾಲೆತ್ತೂರಿನಲ್ಲಿ ಹಲವು ವರ್ಷಗಳಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳು ಹಾಗೂ ಪತ್ರಿಕೆಗಳನ್ನು ಮಾರಾಟ ಮಾಡುತ್ತಿದ್ದೇವೆ. ನಂದಿನಿ ಹಾಲಿನ ಸಂಸ್ಥೆಯ ಅಧಿಕೃತ ಪರವಾನಿಗೆ ಇರುವ ಏಜೆಂಟ್ ನಾವಾಗಿದ್ದೇವೆ. ಕೊರೋನ ವೈರಸ್ ತಡೆಗೆ ರಾಜ್ಯದಲ್ಲಿ ಲಾಕ್‍ಡೌನ್ ಘೋಷಿಸಲಾಗಿದೆ. ಆದರೆ ದಿನ ಬಳಕೆಯ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ಇದ್ದು ಈ ಬಗ್ಗೆ ಜಿಲ್ಲಾಧಿಕಾರಿಯ ಆದೇಶವೂ ಇದೆ. ಪತ್ರಿಕೆ ಹಾಗೂ ಹಾಲು ದಿನ ಬಳಕೆಯ ವಸ್ತುಗಳೆಂದು ಘೋಷಿಸಿಲಾಗಿದ್ದು ಅದರಂತೆ ನಾವು ಬೆಳಗ್ಗೆಯಿಂದ ಅಂಗಡಿ ತೆರದು ಹಾಲು ಮತ್ತು ಪತ್ರಿಕೆ ಮಾರಾಟ ಮಾಡುತ್ತಿದ್ದೆವು ಎಂದು ದೂರುದಾರರು ದೂರಿನಲ್ಲಿ ವಿವರಿಸಿದ್ದಾರೆ.

ಅಂಗಡಿಗೆ ನುಗ್ಗಿರುವ ಎಸ್ಸೈ ವಿನೋದ್ ರೆಡ್ಡಿ ಅವರು ಅಂಗಡಿ ಬಂದ್ ಮಾಡಲೂ ಅವಕಾಶ ನೀಡದೆ ಸಾರ್ವಜನಿಕವಾಗಿ ಅವ್ಯಾಚ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಅಂಗಡಿಯ ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಹಲ್ಲೆ ನಡೆಸಿದ ಎಸ್ಸೈ ವಿನೋದ್ ರೆಡ್ಡಿ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.

ವಿಟ್ಲ ಠಾಣೆಯ ಎಸ್ಸೈ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸಾಲೆತ್ತೂರು ಹಾಲು ಮತ್ತು ಪತ್ರಿಕೆ ಮಾರಾಟದ ಏಜೆಂಟ್ ಒಬ್ಬರು ದೂರು ನೀಡಿದ್ದು ಈ ಬಗ್ಗೆ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ವೆಲೈಂಟಿನ್ ಡಿಸೋಜ, ಬಂಟ್ವಾಳ ಡಿವೈಎಸ್ಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News