ಕೊರೋನ ಶಂಕಿತರಿಗೆ ಪ್ರತ್ಯೇಕ ಕೊಠಡಿ: ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ
ಮಂಗಳೂರು, ಮಾ. 23: ವೆನ್ಲಾಕ್ ಆಸ್ಪತ್ರೆಯಲ್ಲಿ ಕೊರೋನ ಸಂಶಾಯಾಸ್ಪದ ಪ್ರಕರಣಗಳಿಗೆ 8 ವಿಶೇಷ ಪ್ರತ್ಯೇಕ ಕೊಠಡಿಗಳನ್ನು ಕಾದಿರಿಸಲಾಗಿದೆ. ಸಂಶಯಾಸ್ಪದ ಪ್ರಕರಣಗಳು ಬಂದರೆ, ಅಂತಹ ರೋಗಿಗಳನ್ನು ಈ ಕೊಠಡಿಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬೊಬ್ಬರನ್ನು ಒಂದೊಂದು ಕೊಠಡಿಗೆ ಕಾದಿರಿಸಿ ದಾಖಲಿಸಲಾಗುತ್ತಿದೆ. ಅವರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ರಾಜೇಶ್ವರಿ ದೇವಿ ಸ್ಪಷ್ಟಪಡಿಸಿದ್ದಾರೆ.
ಪರೀಕ್ಷೆ ನೆಗೆಟಿವ್ ಬಂದರೆ ಅವರಿಗೆ 14 ದಿನಗಳ ನಿಗಾದಲ್ಲಿರಲು ಸೂಚನೆ ನೀಡಿ ಮನೆಗೆ ಕಳುಹಿಸಲಾಗುತ್ತಿದೆ. ಪೊಸಿಟಿವ್ ಬಂದರೆ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶಿಯಂತೆ ಚಿಕಿತ್ಸೆ ಕೊಡಲಾಗುತ್ತದೆ. ಅದಕ್ಕಾಗಿ ಜಿಲ್ಲಾಧಿಕಾರಿಯ ಆದೇಶದಂತೆ, ವೆನ್ಲಾಕ್‌ನಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶೇಷವಾದ ಪ್ರತ್ಯೇಕ ಕೊಠಡಿಗಳಲ್ಲಿ ಈ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತೀ ರೋಗಿಗೂ ಎಲ್ಲ ರೀತಿಯ ಜೈವಿಕ ಮೆಡಿಕಲ್ ವ್ಯವಸ್ಥೆ ಕಲ್ಪಿಸಿ, ಇಲಾಖೆಯ ಮಾರ್ಗಸೂಚಿಗಳಂತೆ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಅಧೀಕ್ಷಕಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವೆನ್ಲಾಕ್ ಆಸ್ಪತ್ರೆಯಲ್ಲಿ ಕೊರೋನ ಬಗ್ಗೆ ಜಾಗೃತಿ ಮತ್ತು ಮಾಹಿತಿ ನೀಡಲು ಹೆಲ್ಪ್ಡೆಸ್ಕ್ ಸ್ಥಾಪಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲಿ ಕೊರೋನ ಚಿಕಿತ್ಸೆಯ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಗ್ಗೆ ಸೈಬರ್ ಪೊಲೀಸರಿಗೆ ಹಾಗೂ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.