ಒಲಿಂಪಿಕ್ಸ್ ಮುಂದೂಡಿಕೆ ಅನಿವಾರ್ಯ: ಐಒಸಿ

Update: 2020-03-24 04:00 GMT

ಲಾಸ್‌ ಎಂಜಲೀಸ್: ವಿಶ್ವಾದ್ಯಂತ ಕೊರೋನ ಸಾಂಕ್ರಾಮಿಕ ಹರಡಿರುವ ಹಿನ್ನೆಲೆಯಲ್ಲಿ ಈ ವರ್ಷ ಟೋಕಿಯೋದಲ್ಲಿ ನಡೆಯಬೇಕಾದ ಒಲಿಂಪಿಕ್ಸ್ ಕ್ರೀಡಾಕೂಟ ಮುಂದೂಡುವುದು ಅನಿವಾರ್ಯ ಎಂದು ಅಂತರ್ ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಹಿರಿಯ ಅಧಿಕಾರಿ ಡಿಕ್ ಪೌಂಡ್ ಹೇಳಿದ್ದಾರೆ.

ಈ ವರ್ಷದ ಜುಲೈ 24ರಿಂದ ಆಗಸ್ಟ್ 9ರವರೆಗೆ ನಡೆಯಬೇಕಿರುವ ಕೂಟದ ಭವಿಷ್ಯವನ್ನು ಘೋಷಿಸುವ ಮುನ್ನ ಕೆಲ ವಾರಗಳ ಕಾಲ ಕಾದು ನೋಡುವ ತಂತ್ರವನ್ನು ಐಒಸಿ ಅನುಸರಿಸಲಿದೆ ಎಂದು ರವಿವಾರ ಐಒಸಿ ಹೇಳಿತ್ತು. ಕೂಟ ಮುಂದೂಡಿಕೆಗೆ ವ್ಯಾಪಕ ಒತ್ತಡ ಬರುತ್ತಿದೆ.
ಒಲಿಂಪಿಕ್ಸ್ ರದ್ದುಪಡಿಸುವ ಸಾಧ್ಯತೆಯನ್ನು ಅಲ್ಲಗಳೆದಿರುವ ಪೌಂಡ್, ಕೂಟ ಮುಂದೂಡಿಕೆಗೆ ಅಗತ್ಯ ಪೂರ್ವಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಐಒಸಿ ನೀಡಿರುವ ಪ್ರಕಟಣೆಯನ್ನು ವಿಶ್ಲೇಷಿಸಿದಾಗ, ಕೂಟದ ರದ್ದತಿಯನ್ನು ಐಒಸಿ ಬಯಸಿಲ್ಲ ಮತ್ತು ಜುಲೈ 24ರಿಂದ ಅದನ್ನು ಆರಂಭಿಸುವ ಬಗ್ಗೆ ಕೂಡಾ ಯೋಚಿಸುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಆದ್ದರಿಂದ ಮುಂದೂಡುವ ಬಗ್ಗೆ ನಾವು ಯೋಚಿಸುತ್ತಿದ್ದೇವೆ ಎಂದು ಎಎಫ್‌ಪಿ ಜತೆ ಮಾತನಾಡಿದ ಅವರು ಹೇಳಿದರು.

ಲಭ್ಯವಿರುವ ಸಾಧ್ಯತೆಗಳ ಬಗ್ಗೆ ಜಪಾನ್ ಜತೆ ಚರ್ಚೆ ನಡೆಯುತ್ತಿದೆ. ಬಳಿಕ ಅಂತರ್ ರಾಷ್ಟ್ರೀಯ ಒಕ್ಕೂಟಗಳು, ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗಳು, ಅಥ್ಲೀಟ್‌ಗಳು ಹೀಗೆ ಎಲ್ಲ ಹಕ್ಕುದಾರರ ಜತೆ ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲಿದೆ. ಸುಮಾರು ನಾಲ್ಕು ವಾರಗಳ ಕಾಲ ಇಂಥ ಪ್ರಯತ್ನಗಳನ್ನು ನಡೆಸಿ, ನಿಗದಿತ ಸಮಯಸೂಚಿಯೊಂದಿಗೆ ಪ್ಲಾನ್ ಬಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ವಿವರಿಸಿದ್ದಾರೆ.

ಆತಂಕಕಾರಿ ಪ್ರಮಾಣದಲ್ಲಿ ಕೋವಿಡ್-19 ಸೋಂಕು ಪಸರಿಸುತ್ತಿರುವ ಹಿನ್ನೆಲೆಯಲ್ಲಿ ಕೂಟವನ್ನು ಮುಂದೂಡದೇ ಅನ್ಯ ಮಾರ್ಗವಿಲ್ಲ. ಇದು ಜುಲೈ 24ರ ವೇಳೆಗೆ ನಿಯಂತ್ರಣವಾಗುವ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News