ಇಂದು ಕೂಡಾ ಮಂಗಳೂರು ಮಾರುಕಟ್ಟೆ ರಶ್

Update: 2020-03-25 06:41 GMT

ಮಂಗಳೂರು, ಮಾ. 25: ಕೊರೋನ ಸೋಂಕು ಭೀತಿ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್‌ಡೌನ್ ಮಾಡಲಾಗಿದೆ. ಜನಸಾಮಾನ್ಯರು ಬಹುತೇಕವಾಗಿ ಜಿಲ್ಲಾಡಳಿತದ ಸೂಚನೆಗಳನ್ನು ಪಾಲನೆ ಮಾಡುತ್ತಿದ್ದಾರೆ. ಹೈವೇ ಸೇರಿದಂತೆ ನಗರದ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿಯಂತ್ರಿಸಲ್ಪಟ್ಟಿದೆ. ಹಾಗಿದ್ದರೂ ಕೇಂದ್ರ ಮಾರುಕಟ್ಟೆ ಹಾಗೂ ದಿನಸಿ ಅಂಗಡಿಗಳಲ್ಲಿ ಮಾತ್ರ ಜನ ಸಾಮಾನ್ಯರು ಮುಗಿ ಬೀಳುವ ಸನ್ನಿವೇಶ ಇಂದು ಕೂಡಾ ಮುಂದುವರಿಯಿತು.

ಲೌಕ್‌ಡೌನ್ ಹೊರತಾಗಿಯೂ ದಿನಬಳಕೆಯ ಸಾಮಗ್ರಿಗಳು ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಇಂದು ಕೂಡಾ ಬೆಳಗ್ಗೆ 10ರಿಂದ 12ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಬಹು ಮುಖ್ಯವಾಗಿ ಕೇಂದ್ರ ಮಾರುಕಟ್ಟೆ ಸೇರಿದಂತೆ ಅಂಗಡಿಗಳ ಎದುರು ಜನರು ಗುಂಪು ಗುಂಪಾಗಿ ಸೇರಿದ್ದರು. ಕೇಂದ್ರ ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣುಹಂಪಲುಗಳ ಖರೀದಿಗೆ ಜನರು ನೂರಾರು ಸಂಖ್ಯೆಯಲ್ಲಿ ಸೇರಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ನಿಯಮವನ್ನೇ ಮರೆತು ಖರೀದಿಯಲ್ಲಿ ತೊಡಗಿದ್ದರು. 12 ಗಂಟೆಯವರೆಗೆ ಅವಕಾಶವಿದ್ದರೂ ಜನರು ಮಾತ್ರ ಆತುರಾತುರವಾಗಿ ಗುಂಪು ಗುಂಪಾಗಿ ಸೇರಿದ್ದರಿಂದ ಪಾಲಿಕೆಯ ಹಿರಿಯ ಅಧಿಕಾರಿಗಳೇ ಖುದ್ದು ಕೇಂದ್ರ ಮಾರುಕಟ್ಟೆಯತ್ತ ಆಗಮಿಸಿ ಅಂಗಡಿಗಳನ್ನು ಮುಚ್ಚಿಸಿದರು. ಜನರನ್ನು ಚದುರಿಸಲು ಲಾಠಿ ಹಿಡಿದು ಬೆದರಿಸಿದರಲ್ಲದೆ, ಮೈಕ್‌ಗಳ ಮೂಲಕ ಜಾಗ ಖಾಲಿ ಮಾಡುವಂತೆ ಸೂಚಿಸಿದರು. ಸುಮಾರು 10.30ರ ವೇಳೆಗೆ ಸಂಪೂರ್ಣ ಕೇಂದ್ರ ಮಾರುಕಟ್ಟೆಯನ್ನೇ ಬಂದ್ ಮಾಡಲಾಯಿತು.

ನಿಯಮ ಉಲ್ಲಂಘಿಸುವ ಅಂಗಡಿಗಳ ಪರವಾನಿಗೆ ರದ್ದು!

‘‘ಕೇಂದ್ರ ಮಾರುಕಟ್ಟೆ ಸಮಿತಿಯವರು ನಿನ್ನೆ ಮನಪಾ ಬಳಿ ಬಂದು ವ್ಯಾಪಾರಕ್ಕೆ ಮನವಿ ಮಾಡಿದ್ದರು. ಜನರಿಗೆ ತೊಂದರೆ ಆಗದ ರೀತಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸಹಕಾರವನ್ನು ಕೂಡಾ ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರು ನೀಡಿದ್ದಾರೆ. ಹಾಗಿದ್ದರೂ ಇಂದು ಬೆಳಗ್ಗೆ ಮಾರುಕಟ್ಟೆಯಲ್ಲಿ ಜನರು ಗುಂಪು ಗುಂಪಾಗಿ ಖರೀದಿ ಮಾಡಲಾರಂಭಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಯಾವುದೇ ನಿಯಮ ವನ್ನು ಪಾಲಿಸುತ್ತಿಲ್ಲ. ಹಾಗಾಗಿ ಅನಿವಾರ್ಯವಾಗಿ ಅಂಗಡಿಗಳನ್ನು ಮುಚ್ಚಿಸಬೇಕಾಗಿದೆ. ಇನ್ನು ಮುಂದೆ ನಿಯಮಗಳನ್ನು ಉಲ್ಲಂಘಿಸುವ ಅಂಗಡಿಗಳ ಪರವಾನಿಗೆಯನ್ನು ರದ್ದು ಮಾಡಲು ಮನಪಾ ನಿರ್ಧರಿಸಿದೆ’’ ಎಂದು ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ತಿಳಿಸಿದರು.

ಮನಪಾ ಜಂಟಿ ಆಯುಕ್ತ ಡಾ. ಸಂತೋಷ್ ಕುಮಾರ್ ಹಾಗೂ ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ, ಪೊಲೀಸರು ಸೇರಿ ಇತರ ಅಧಿಕಾರಿಗಳೊಂದಿಗೆ ಕೇಂದ್ರ ಮಾರುಕಟ್ಟೆಯಲ್ಲಿ ಜನ ಸಮೂಹವನ್ನು ಪಾಲಿಕೆ ಆಯುಕ್ತರು ಖುದ್ದು ಸ್ಥಳದಲ್ಲಿ ಉಪಸ್ಥಿತರಿದ್ದು ತೆರವುಗೊಳಿಸಿದರು.

ತ್ಯಾಜ್ಯ ಹೆಚ್ಚು ಉತ್ಪತ್ತಿಯಾಗದಂತೆ ಕ್ರಮ ವಹಿಸಿ

ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ತ್ಯಾಜ್ಯ ತೆರವು ಕಾರ್ಯವನ್ನು ನಡೆಸಲಾಗುತ್ತಿದೆ. ಆದರೆ ವಾಹನಗಳಲ್ಲಿ ದುಡಿಯುವವರಿಗೂ ಲಾಕ್‌ಡೌನ್ ಅನ್ವಯಿಸುವುದರಿಂದ, ಸೋಂಕಿನಿಂದ ಅವರನ್ನೂ ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿರುವುದರಿಂದ ಮನೆಗಳಲ್ಲಿ ಕಸ ಉತ್ಪತ್ತಿಯನ್ನು ಕಡಿಮೆಗೊಳಿಸಲು ಜನರು ಕೂಡಾ ಸಹಕರಿಸಬೇಕು ಎಂದು ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಹೆಗ್ಡೆ ಮನವಿ ಮಾಡಿದ್ದಾರೆ.

ಮೆಡಿಕಲ್‌ಗಳಲ್ಲೂ ಸಾಮಾಜಿಕ ಅಂತರ ಪಾಲನೆಯಾಗಲಿ

ತುರ್ತು ಸೇವೆಯಾದ ಮೆಡಿಕಲ್‌ಗಳಲ್ಲಿ ಸರತಿ ಸಾಲಿನಲ್ಲಿ ಜನರು ಔಷಧಿಗಳನ್ನು ಖರೀದಿಸುತ್ತಿದ್ದಾರೆ. ಅವರು ಕೂಡಾ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಲಾಕ್‌ಡೌನ್‌ನ ಉದ್ದೇಶವನ್ನು ಯಶಸ್ವಿಗೊಳಿಸಬೇಕಾಗಿದೆ.

ನಗರದ ಮೆಡಿಕಲ್‌ಗಳಲ್ಲಿ ಸರತಿ ಸಾಲಿನಲ್ಲಿಯೇ ಔಷಧಿಗಳನ್ನು ಖರೀದಿಗೆ ಅವಕಾಶ ನೀಡಲಾಗುತ್ತಿದೆ. ಮಾತ್ರವಲ್ಲದೆ ಮಾಸ್ಕ್‌ಗಳನ್ನು ಹಾಕಿಕೊಳ್ಳುವಂತೆ ವಾಚ್‌ಮೆನ್ ಸೂಚಿಸುತ್ತಾರೆ. ಜತೆಗೆ ಸ್ಯಾನಿಟೈಸರ್ ಕೂಡಾ ಒದಗಿಸುತ್ತಾರೆ. ಇದೇ ವೇಳೆ ಜನರು ತಾವಾಗಿಯೇ ಸರತಿ ಸಾಲಿನಲ್ಲಿ ಇಬ್ಬರ ನಡುವೆ ಕನಿಷ್ಟ 3 ಅಡಿಗಳ ಅಂತರವನ್ನು ಕಾಯ್ದುಕೊಳ್ಳುವಲ್ಲಿ ಬದ್ಧರಾಗಬೇಕು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News