ದ.ಕ. ಜಿಲ್ಲೆಯಲ್ಲಿ ಆಹಾರ ಸಾಮಗ್ರಿಗಳ ಪೂರೈಕೆ ನಿರಂತರ, ಆತಂಕ ಬೇಡ: ಡಿಸಿ

Update: 2020-03-25 12:25 GMT

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಅಕ್ಕಿ, ತರಕಾರಿ, ಹಣ್ಣುಹಂಪಲು ಸೇರಿದಂತೆ ಆಹಾರ ಸಾಮಗ್ರಿಗಳ ಪೂರೈಕೆ ನಿರಂತರವಾಗಿರಲು ಜಿಲ್ಲಾಡಳಿತ ಕ್ರಮ ಕೈಗೊಂಡಿರುವುದಾಗಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್  ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಗತ್ಯ ವಸ್ತುಗಳ ಪೂರೈಕೆ ಸಂಬಂಧಿಸಿ ಇಂದು ಉನ್ನತ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಸಗಟು ಮಾರಾಟಗಾರರಿಗೆ ಅಗತ್ಯವಾದ ಅಕ್ಕಿ, ಜಿನಸು ಸೇರಿದಂತೆ ಆಹಾರ ಸಾಮಗ್ರಿ ಪೂರೈಕೆ ಆಗುವಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಆಹಾರ ಸಾಮಗ್ರಿ ಸಾಗಿಸುವ ವಾಹನಗಳಿಗೆ ಯಾವುದೇ ಅಡೆತಡೆ ಆಗದಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಗೆ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಇತರ ಜಿಲ್ಲೆಗಳಿಂದ ತರಕಾರಿ ಹಣ್ಣು ಹಂಪಲು ಸರಬರಾಜು ಆಗುತ್ತಿದ್ದು, ಅಕ್ಕಿ ಉಡುಪಿಯಿಂದ ರವಾನೆಯಾಗುತ್ತದೆ. ಇಂತಹ ವಾಹನಗಳಿಗೆ ತಾವು ಯಾವುದೇ ಕಾರಣಕ್ಕೂ ಅಡೆತಡೆ ಮಾಡದಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಪ್ರತಿದಿನ ಬೆಳಗ್ಗೆ 6ರಿಂದ 12 ಗಂಟೆಯವರೆಗೆ ಆಹಾರ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅಂಗಡಿಗಳು ತೆರೆದಿರುತ್ತವೆ. ಸಾರ್ವಜನಿಕರು ಒಮ್ಮೆಗೆ ಸಾಮಗ್ರಿಗಳನ್ನು ಖರೀದಿಸುವ ಅಗತ್ಯವಿಲ್ಲ. ಆಹಾರ ಸಾಮಗ್ರಿ ಸಾಕಷ್ಟು ದಾಸ್ತಾನು ಇರುವಂತೆ ಅಹಾರ ಇಲಾಖೆಗೆ ಸೂಚಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ವತಿಯಿಂದಲು ಸ್ಥಳೀಯ ತಂಡ ರಚಿಸಿ ನಿಗಾ ಇಡಲು ಸೂಚಿಸಲಾಗಿದೆ‌. ಜನರು ಖರೀದಿಗಾಗಿ ಅಂಗಡಿಗಳಲ್ಲಿ ಮುಗಿ ಬೀಳಬಾರದು. ಖರೀದಿ ಸಂದರ್ಭ ಶಿಸ್ತು,  ಸಾರ್ವಜನಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದ ಜಿಲ್ಲಾಧಿಕಾರಿ ನಿತ್ಯ ಬಳಕೆಯ ವಸ್ತುಗಳ ಸಾಗಾಟದ ವಾಹನಗಳಿಗೆ ತಡೆ ಉಂಟಾಗದಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರೂಪ, ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್, ಡಿಸಿಪಿ ಅರುಣಾಂಶಗಿರಿ, ಪಾಲಿಕೆ ಜಂಟಿ ಆಯುಕ್ತ ಡಾ. ಸಂತೋಷ್ ಕುಮಾರ್, ಆಹಾರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News