ನಾವು 'ಕೊರೋನ' ಸೃಷ್ಟಿಸಿಲ್ಲ, ಉದ್ದೇಶಪೂರ್ವಕವಾಗಿ ಹರಡಿಲ್ಲ: ಚೀನಾದ ಸ್ಪಷ್ಟನೆ

Update: 2020-03-26 06:41 GMT

ಹೊಸದಿಲ್ಲಿ: ತಾನು ಕೊರೋನ ವೈರಸ್ ಸೃಷ್ಟಿಸಿಲ್ಲ ಅಥವಾ ಅದನ್ನು ಹರಡಿಲ್ಲ ಎಂದು ಬುಧವಾರ ಸ್ಪಷ್ಟೀಕರಣ ನೀಡಿದ ಚೀನಾ, 'ಚೈನೀಸ್ ವೈರಸ್' ಅಥವಾ 'ವುಹಾನ್ ವೈರಸ್' ಪದಗಳ ಬಳಕೆ ತಪ್ಪು ಎಂದು ಹೇಳಿದೆ.

ಚೀನಾ ದೇಶ ಈ ಸಾಂಕ್ರಾಮಿಕ ರೋಗದ ವಿರುದ್ಧ ತೋರಿಸಿದ ಕ್ಷಿಪ್ರ ಪ್ರತಿಕ್ರಿಯೆಯತ್ತ ಅಂತರಾಷ್ಟ್ರೀಯ ಸಮುದಾಯವು ಗಮನ ನೀಡಬೇಕೇ ಹೊರತು 'ಚೀನೀ ಜನರನ್ನು ದೂರುವುದಲ್ಲ,'' ಎಂದು ಭಾರತದಲ್ಲಿನ ಚೀನಾ ರಾಯಭಾರಿ ಕಚೇರಿಯ ವಕ್ತಾರ ಜೀ ರೋಂಗ್ ಹೇಳಿದ್ದಾರೆ.

ಕೋವಿಡ್-19 ಎಂದು ಕರೆಯಲ್ಪಡುವ ಈ ವೈರಸ್‍ನ ಮೂಲ ಚೀನಾ ದೇಶ ಆಗಿದೆ ಎಂಬುದಕ್ಕೆ ಯಾವುದೇ ಪುರಾವೆಯಿಲ್ಲ, ಎಂದು ಹೇಳಿದ ಅವರು "ಈ ವೈರಸ್ ಮೂಲ ಕುರಿತಂತೆ ಅಧ್ಯಯನ ಅಗತ್ಯ, ಚೀನಾ ಉದ್ದೇಶಪೂರ್ವಕವಾಗಿ ಈ ವೈರಸ್ ಹರಡಿಲ್ಲ, 'ಚೈನೀಸ್ ವೈರಸ್' ಎನ್ನುವುದು ಶುದ್ಧ ತಪ್ಪು,'' ಎಂದು ಅವರು ಹೇಳಿದರು.

"ಕಷ್ಟದ ಕಾಲದಲ್ಲಿ ಭಾರತ ಮತ್ತು ಚೀನಾ ದೇಶಗಳೆರಡೂ ಪರಸ್ಪರ ಸಹಕಾರ ನೀಡಿವೆ, ಭಾರತವು ಚೀನಾಗೆ ವೈದ್ಯಕೀಯ ಅಗತ್ಯತೆಗಳನ್ನು ಒದಗಿಸಿ ಕೊರೋನ ವಿರುದ್ಧದ ಹೋರಾಟಕ್ಕೆ ಹಲವು ರೀತಿಯಲ್ಲಿ ಸಹಕರಿಸಿದೆ, ಅದಕ್ಕೆ ನಾವು ಚಿರಋಣಿ,'' ಎಂದು ಅವರು ಹೇಳಿದ್ದಾರೆ.

ಚೀನಾ ಮತ್ತು ವುಹಾನ್ ಅನ್ನು ವೈರಸ್ ಜತೆ ನಂಟು ಕಲ್ಪಿಸಿ ಮಾತನಾಡುವುದನ್ನು ಸರಿಪಡಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯೂ ಹೇಳಿದೆ ಎಂದು ತಿಳಿಸಿದ ಅವರು "ಚೀನಾ ಸರಕಾರದ ಅವಿರತ ಶ್ರಮವನ್ನು ನಿರ್ಲಕ್ಷ್ಯಿಸುವವರು ಮಾನವಕುಲದ ಸುರಕ್ಷತೆಗಾಗಿ ಅಲ್ಲಿನ ಜನರು ಮಾಡಿದ ತ್ಯಾಗಗಳನ್ನು ನಿರ್ಲಕ್ಷ್ಯಿಸಿದಂತೆ,'' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News