ಜುಮಾ ನಮಾಝ್ ಇರಲಿ, ಇಲ್ಲದಿರಲಿ ಯಾವ ಕಾರಣಕ್ಕೂ ಈಗ ಮಸೀದಿಯಲ್ಲಿ ಸೇರಬೇಡಿ: ಯಾಸೀನ್ ಮಲ್ಪೆ

Update: 2020-03-26 13:36 GMT

ಉಡುಪಿ : ಮಸೀದಿಗಳಲ್ಲಿ ಜುಮಾ ನಮಾಝ್ ಇರಲಿ, ಇಲ್ಲದಿರಲಿ ಯಾವ ಕಾರಣಕ್ಕೂ ಜನರಿಗೆ ಮಸೀದಿಯಲ್ಲಿ ಸೇರಲು ತಾತ್ಕಾಲಿಕವಾಗಿ ಅವಕಾಶ ಕೊಡದಿರಿ. ಈ ವ್ಯವಸ್ಥೆ ಎ.15ರವರೆಗೆ ಇರುವಂತೆ ಎಲ್ಲಾ ಜುಮಾಗಳಿಗೆ ಅನ್ವಯವಾಗಲಿ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷ ಮುಹಮ್ಮದ್ ಯಾಸೀನ್ ಮಲ್ಪೆ ತಿಳಿಸಿದ್ದಾರೆ.

ಇಸ್ಲಾಮಿನ ಶಿಕ್ಷಣಗಳು ಮತ್ತು ಕರ್ಮಶಾಸ್ತ್ರೀಯ ಅಭಿಪ್ರಾಯಗಳನ್ನು ಮುಂದಿಟ್ಟು ಒಂದೋ ಮಸೀದಿಯ ಇಮಾಮರು ಮತ್ತು ಸಿಬ್ಬಂದಿ ಮಾತ್ರ ಸೇರಿ ಸಂಕ್ಷಿಪ್ತ ಖುತ್ಬಾದೊಂದಿಗೆ ಜುಮಾ ನಿರ್ವಹಿಸಬಹುದು ಮತ್ತು ಜಮಾತಿಗರು ತಮ್ಮ ತಮ್ಮ ಮನೆಗಳಲ್ಲಿ ಝೊಹರ್ ನಮಾಝ್ ನಿರ್ವಹಿಸಬಹುದು ಅಥವಾ ಮಸೀದಿಯ ಸಿಬ್ಬಂದಿ ಮಸೀದಿಯಲ್ಲೂ ಜಮಾಅತ್ ನವರು ತಮ್ಮ ತಮ್ಮ ಮನೆಗಳಲ್ಲೂ ಝೊಹರ್ ನಮಾಝ್ ನಿರ್ವಹಿಸಬಹುದು ಎಂದು ಅವರು ತಿಳಿಸಿದರು.

ಕೊರೋನ ವೈರಸ್ ಹರಡುವಿಕೆಯಿಂದ ಇಂದು ಇಡೀ ಜಗತ್ತೇ ಭಯಭೀತವಾಗಿದೆ. ನಮ್ಮ ದೇಶವೂ ಒಳಗೊಂಡಂತೆ ಇಡೀ ಜಗತ್ತಿನಲ್ಲೇ ಇಂದು ಬಂದ್ ಘೋಷಿಸಲಾಗಿದೆ. ಭಾರತ ಸರ್ಕಾರ ಮುಂದಿನ ಎ.15ರ ವರೆಗೆ ಮನೆಗಳಿಂದ ಕದಲದಂತೆ ಕಟ್ಟೆಚ್ಚರಿಕೆ ನೀಡಿದೆ. ದೇಶದ ಮುಸ್ಲಿಮರು ತಮ್ಮ ಧಾರ್ಮಿಕ ನಂಬಿಕೆಗಳ ಮಿತಿಯಲ್ಲಿದ್ದುಕೊಂಡು ಸರ್ಕಾರದ ನಿರ್ದೇಶನಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಉಲೆಮಾಗಳು ಕೂಡ ಈ ವಿಷಯದಲ್ಲಿ ಅತ್ಯಂತ ಪ್ರಬುದ್ಧತೆಯೊಂದಿಗೆ ಸಮುದಾಯಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದು ಹೇಳಿದರು.

ವಿಶೇಷವಾಗಿ ಉಡುಪಿ ಜಿಲ್ಲೆಯ ಮುಸ್ಲಿಮರು ಪರಸ್ಪರ ಸಮಾಲೋಚನೆಯೊಂದಿಗೆ ಇಡೀ ಜಿಲ್ಲೆಯಲ್ಲಿ ಒಂದು ನಿಲುವು ಕೈಗೊಂಡಿದ್ದಾರೆ. ಕೊರೋನ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಸಹಕರಿಸುತ್ತಾ, ಪ್ರತಿಕೂಲ ಪರಿಸ್ಥಿತಿಯಲ್ಲಿ ಇಸ್ಲಾಮ್ ನೀಡುವ ಶಿಕ್ಷಣಗಳಿಗೆ ಬದ್ಧರಾಗಿದ್ದಾರೆ. ಜುಮಾ ನಮಾಝ್  ಬಗ್ಗೆ ಗೊಂದಲ, ಪ್ರತಿಕೂಲ ಪರಿಸ್ಥಿತಿಗಳಲ್ಲಿ ಇಸ್ಲಾಮಿನ ಶಿಕ್ಷಣಗಳು, ಜನರ ಆರೋಗ್ಯದ ಬೇಡಿಕೆಗಳು, ಸರ್ಕಾರದ ನಿರ್ದೇಶನಗಳು ಹಾಗೂ ಉಲೆಮಾಗಳ ಸಲಹೆಗಳ ಆಧಾರದಲ್ಲಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟವು ಈ ಕೆಳಗಿನಂತೆ ತೀರ್ಮಾನ ಕೈಗೊಳ್ಳುತ್ತದೆ ಮತ್ತು ಇದನ್ನು ಜಾರಿಗೊಳಿಸು ವಂತೆ ಜಿಲ್ಲೆಯ ಮುಸ್ಲಿಮರಲ್ಲಿ, ವಿಶೇಷವಾಗಿ ಮಸೀದಿಗಳ ಹೊಣೆಗಾರರಲ್ಲಿ ವಿನಂತಿಸುವುದಾಗಿ ಮುಹಮ್ಮದ್ ಯಾಸೀನ್ ಮಲ್ಪೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News