ಕೊರೋನ ನಿರ್ದೇಶನಗಳನ್ನು ಪಾಲಿಸದಿದ್ದಲ್ಲಿ ಕ್ರಿಮಿನಲ್ ಪ್ರಕರಣ: ಜಿಲ್ಲಾಧಿಕಾರಿ ಜಿ.ಜಗದೀಶ್

Update: 2020-03-26 14:50 GMT

ಉಡುಪಿ, ಮಾ.26: ಜಿಲ್ಲೆಯಲ್ಲಿ ಕೊರೋನ ಹರಡುವುದನ್ನು ತಡೆಯಲು ಈಗಾಗಲೇ ನಾಗರಿಕರ ಸಂಚಾರ ನಿರ್ಬಂಧಿಸಿ ಸಿಅರ್‌ಪಿಸಿ ಸೆಕ್ಷನ್ 144(3) ರಲ್ಲಿ ಆದೇಶ ಹೊರಡಿಸಿದ್ದಲ್ಲದೇ, ಇನ್ನೂ ಅನೇಕ ನಿರ್ದೇಶನಗಳನ್ನು ಹೊರಡಿಸಲಾಗಿದೆ.

ಆದರೆ, ಜಿಲ್ಲೆಯ ನಾಗರಿಕರು ಈ ಆದೇಶಗಳನ್ನು ಉಲ್ಲಂಘನೆ ಮಾಡುತ್ತಿ ರುವ ಬಗ್ಗೆ ವರದಿಗಳು ಬರುತಿದ್ದು, ಇಂತಹ ಪ್ರಕರಣಗಳನ್ನು ತುರ್ತಾಗಿ ನಿಯಂತ್ರಿಸುವ ಅಗತ್ಯವಿರುವುದರಿಂದ, ಕಾನೂನು ಕ್ರಮ ಕೈಗೊಳ್ಳುವ ಅವಶ್ಯಕತೆ ಎದುರಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಸಿಆರ್‌ಪಿಸಿ ಆದೇಶ ಮತ್ತು ಕೋವಿಡ್ ರೋಗವನ್ನು ನಿಯಂತ್ರಿಸಲು ಹೊರಡಿಸಲಾಗಿರುವ ಇತರೇ ನಿರ್ದೇಶನಗಳನ್ನು ಪಾಲಿಸದೇ ಇದ್ದವರ ಮೇಲೆ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವ ಅಧಿಕಾರ ವನ್ನು ಕುಂದಾಪುರ ಉಪವಿಬಾಗಾಧಿಕಾರಿಗಳು, ಉಡುಪಿ, ಕಾಪು, ಬ್ರಹ್ಮಾವರ, ಕುಂದಾಪುರ, ಕಾರ್ಕಳ, ಬೈಂದೂರು, ಹೆಬ್ರಿ ತಹಶೀಲ್ದಾರ್‌ಗಳಿಗೆ ಪ್ರತ್ಯಾಯೋಜಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.

ಉಲ್ಲಂಘಿಸದಂತೆ ಕರೆ: ವಿದೇಶಗಳಿಂದ ಉಡುಪಿ ಜಿಲ್ಲೆಗೆ ಸುಮಾರು 1000 ಮಂದಿ ಆಗಮಿಸಿ ಹೋಮ್ ಕ್ವಾರಂಟೈನ್ನಲ್ಲಿದ್ದಾರೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಇತರ ಅಧಿಕಾರಿಗಳು ಈಗಾಗಲೇ ಸುತ್ತಮುತ್ತಲಿನ ಮನೆಗಳಿಗೆ ನೋಟೀಸ್ ಮೂಲಕ ಮಾಹಿತಿ ನೀಡಿದ್ದಾರೆ. ಅಲ್ಲದೇ ಅಂತವರ ಮನೆಗೆ ಅಧಿಕಾರಿಗಳು ಭೇಟಿ ನೀಡಿ ಮನೆಯಿಂದ ಹೊರಗೆ ಬಾರದಂತೆ ವಿನಂತಿಸಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

ವಿದೇಶಗಳಿಂದ ಆಗಮಿಸಿದವರು ತಮ್ಮ ಹೋಮ್ ಕ್ವಾರಂಟೈನ್ ಅವಧಿ ಮುಗಿಯುವ ತನಕ ಹೊರಗಡೆ ಬರುವಂತಿಲ್ಲ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಆದೇಶವನ್ನು ಉಲ್ಲಂಘಿಸಿ ಯಾವುದೇ ವ್ಯಕ್ತಿ ಸುತ್ತಾಡುವುದನ್ನು ಯಾರಾದರೂ ಗಮನಿಸಿದರೆ, ಅಕ್ಕಪಕ್ಕದ ಮನೆಯವರು 9480242600 ಸಂಖ್ಯೆಗೆ ದೂರನ್ನು ನೀಡಬಹುದು. ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೋಮ್ ಕ್ವಾರಂಟೈನ್ ನಲ್ಲಿರುವವರಿಗೆ ಎಚ್ಚರಿಸಿದ್ದಾರೆ.

ಹೋಮ್ ಕ್ವಾರಂಟೈನ್ ಅವಧಿಯಲ್ಲಿ ಹೊರಗೆ ತಿರುಗಾಡಿದರೆ ಬೇರೆಯ ವರಿಗೆ ತೊಂದರೆಯಾಗುತ್ತದೆ. ಆದುದರಿಂದ ಎಲ್ಲರೂ ಕೋವಿಡ್-19 ತಡೆಗಟ್ಟಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News