ಮಣಿಪಾಲ ಕೆಎಂಸಿಯಲ್ಲಿ ಎ.15ರವರೆಗೆ ಹೊರರೋಗಿ ವಿಭಾಗದ ಚಿಕಿತ್ಸೆ ಸಂಪೂರ್ಣ ನಿಷೇಧ

Update: 2020-03-26 15:09 GMT

ಮಣಿಪಾಲ, ಮಾ. 26: ಮುಂದಿನ ಎಪ್ರಿಲ್ 15ರವರೆಗೆ ಮಣಿಪಾಲ ಕಸ್ತೂರ್‌ಬಾ ಆಸ್ಪತ್ರೆಯ ಹೊರರೋಗಿ ವಿಭಾಗದ ಚಿಕಿತ್ಸೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಲ್ಲದೇ ಮಾ.27ರಿಂದ ಉಡುಪಿಯಲ್ಲಿರುವ ಡಾ.ಟಿಎಂಎ ಪೈ ಆಸ್ಪತ್ರೆಯ ಹೊರರೋಗಿ ವಿಭಾಗ, ಒಳರೋಗಿ ವಿಭಾಗ ಹಾಗೂ ತುರ್ತುಸೇವಾ ವಿಭಾಗವನ್ನು ಸಂಪೂರ್ಣವಾಗಿ ಮುಚ್ಚಲಾಗುವುದು ಎಂದೂ ಅವರು ಹೇಳಿದ್ದಾರೆ.

ನೋವೆಲ್ ಕೊರೋನ ವೈರಸ್ (ಕೋವಿಡ್-19) ಹರಡುವುದನ್ನು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿ ತತ್‌ಕ್ಷಣದಿಂದ ಜಾರಿಗೆ ಬರುವಂತೆ ಎ.15ರವರೆಗೆ ಆಸ್ಪತ್ರೆಯ ಹೊರರೋಗಿ ವಿಭಾಗದ ಚಿಕಿತ್ಸೆಯನ್ನು ಸಂಪೂರ್ಣ ವಾಗಿ ನಿಷೇಧಿಸಲು ಕೆಎಂಸಿ ಆಸ್ಪತ್ರೆಯ ಆಡಳಿತ ಮಂಡಳಿ ನಿರ್ಧರಿಸಿದೆ. ಆದರೆ ವೈದ್ಯಕೀಯ ತುರ್ತು ಚಿಕಿತ್ಸೆ ಮತ್ತು ತ್ವರಿತ ಅವಶ್ಯಕ ಚಿಕಿತ್ಸೆಯಲ್ಲಿ ಬದಲಾವಣೆಯನ್ನು ಸೂಚಿಸಲಾಗಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ್ವರ, ಕೆಮ್ಮು ಮತ್ತು ಇನ್ನಿತರೆ ಅಗತ್ಯ ತಪಾಸಣೆಗೆ ಬರುವ ರೋಗಿಗಳು ನೇರವಾಗಿ ಆಸ್ಪತ್ರೆಯ ಹೊರಾಂಗಣದಲ್ಲಿ ಹಾಕಿರುವ ತಾತ್ಕಾಲಿಕ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಬೇಕು. ಮುಂದಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಆಸ್ಪತ್ರೆಯ ಸಂಬಂಧಿತ ವಿಭಾಗದಲ್ಲಿ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಕೀಮೋಥೆರಪಿ ಮತ್ತು ರೇಡಿಯೋಥೆರಪಿ ರೋಗಿಗಳು ನೇರವಾಗಿ ಶಿರಡಿ ಸಾಯಿಬಾಬಾ ಕ್ಯಾನ್ಸರ್ ಆಸ್ಪತ್ರೆಗೆ ಬರಬಹುದು. ಗರ್ಭಿಣಿ ಸ್ತ್ರೀಯರು ನೇರವಾಗಿ ಮಹಿಳಾ ಮತ್ತು ಮಕ್ಕಳ ವಿಭಾಗಕ್ಕೆ, ಡಯಾಲಿಸಿಸ್‌ನಲ್ಲಿರುವವರು ನೇರವಾಗಿ ಡಯಾಲಿಸಿಸ್ ಕೇಂದ್ರಕ್ಕೆ ಬರಬಹುದು. ಪ್ರಯೋಗಾಲಯ ಪರೀಕ್ಷಾ ಸೇವೆಯು ತುರ್ತು ಸಂದರ್ಭಕ್ಕೆ ಮಾತ್ರ ಅನ್ವಯಿಸುವುದು.

ಮಕ್ಕಳಿಗೆ ಕೊಡಲಾಗುವ ಲಸಿಕಾ ಸೌಲಭ್ಯ ಕೂಡಾ ಎ.15ರವರೆಗೆ ಇರುವುದಿಲ್ಲ. ಇವೆಲ್ಲರ ಹೊರತಾಗಿ ಅಪಘಾತ ಮತ್ತು ತುರ್ತು ಚಿಕಿತ್ಸಾ ಸೇವೆ ಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ. ಸಾರ್ವಜನಿಕರು ಸಹಕರಿಸುವಂತೆ ವೈದ್ಯಕೀಯ ಅಧೀಕ್ಷಕರು ಕೋರಿದ್ದಾರೆ.

ಶುಕ್ರವಾರದಿಂದ ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯಲ್ಲಿ ಹೊರರೋಗಿ, ಒಳರೋಗಿ ಮತ್ತು ತುರ್ತುಸೇವಾ ವಿಭಾಗವನ್ನು ಮುಚ್ಚಲಾಗುವುದು. ತುರ್ತುಸೇವೆ ಅವಶ್ಯವಿರುವ ಡಾ. ಟಿಎಂಎ ಪೈ ಆಸ್ಪತ್ರೆಯ ಎಲ್ಲಾ ರೋಗಿಗಳು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಭೇಟಿ ನೀಡುವಂತೆ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News